ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಮುಗಿದು ಹದಿನೈದು ದಿನಗಳ ನಂತರ ಬರುವ ನೂಲ ಹುಣ್ಣಿಮೆಯನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲು ಮಹಿಳೆಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಕ್ಕ–ತಂಗಿಯಂದಿರು, ತಮ್ಮ–ಅಣ್ಣಂದಿರಿಂದ ಶ್ರೀರಕ್ಷೆ ಬಯಸುವ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಭ್ರಾತೃತ್ವದ ಬಂಧ ಬೆಸೆಯುವ ಈ ಆಚರಣೆ ದಿನವಾದ ಶನಿವಾರ, ಜಿಲ್ಲೆಯಾದ್ಯಂತ ಸಂಭ್ರಮ ಇರುತ್ತದೆ.
ಒಡಹುಟ್ಟಿದವರು, ಕುಟುಂಬದ ಪರಿಚಯಸ್ಥರು, ಒಂದೇ ಪ್ರದೇಶದಲ್ಲಿ ವಾಸವಿರುವವರು, ಶಾಲೆ–ಕಾಲೇಜಿನಲ್ಲಿರುವವರು ಹಾಗೂ ಇತರೆಡೆ ಇರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು, ತಮ್ಮ ಸಹೋದರರಿಗೆ ರಾಖಿ ಕಟ್ಟುವ ಘಳಿಗೆ ಇದಾಗಿದೆ.
ನೂಲು ಹುಣ್ಣಿಮೆಯಂದು ರಾಖಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ನಾಗರಪಂಚಮಿ ಆರಂಭದ ದಿನದಿಂದಲೇ ಜಿಲ್ಲೆಯಾದ್ಯಂತ ರಾಖಿಗಳ ಮಾರಾಟ ಆರಂಭವಾಗಿದೆ.
ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ರಾಖಿಗಳ ಮಾರಾಟ ಜೋರಾಗಿದೆ. ಬಾಲಕಿಯರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಅಂಗಡಿಗಳಿಗೆ ಹೋಗಿ ರಾಖಿ ಖರೀದಿಸುತ್ತಿದ್ದಾರೆ.
ಹಾವೇರಿಯ ಎಂ.ಜಿ.ರಸ್ತೆಯ ಅಕ್ಕ–ಪಕ್ಕದಲ್ಲಿರುವ ತಳ್ಳುಗಾಡಿಯಲ್ಲಿಯೂ ರಾಖಿಗಳ ಮಾರಾಟ ನಡೆಯುತ್ತಿದೆ. ಗುರುವಾರ ಮಾರುಕಟ್ಟೆಗೆ ಬಂದಿದ್ದ ಬಾಲಕಿಯರು ಹಾಗೂ ಮಹಿಳೆಯರು, ತಮ್ಮಿಷ್ಟದ ರಾಖಿಗಳನ್ನು ಖರೀದಿಸಿದರು.
₹ 10 ಬೆಲೆಯಿಂದ ₹ 500 ಬೆಲೆಯವರೆಗೂ ರಾಖಿಗಳು ಮಾರಾಟವಾಗುತ್ತಿವೆ. ಕೆಲವರು ಬೆಳ್ಳಿ ರಾಖಿಗಳನ್ನು ಖರೀದಿಸಿ ಕೊಂಡೊಯ್ದರು.
‘ಪ್ರತಿಯೊಬ್ಬ ಮಹಿಳೆಗೂ ಸಹೋದರನ ಆಸರೆ ಬೇಕಾಗುತ್ತದೆ. ಜೊತೆಗೆ, ಯಾವುದೇ ಸಂದರ್ಭದಲ್ಲೂ ಸಹೋದರರ ಸಹಕಾರ ಅಗತ್ಯವಿರುತ್ತದೆ. ಸಹೋದರತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಜೀವನಪೂರ್ತಿ ಶ್ರೀರಕ್ಷೆ ನೀಡುವ ಉದ್ದೇಶದಿಂದ ಈ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ಹಾವೇರಿಯ ನಿವಾಸಿ ಸುಷ್ಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.