ADVERTISEMENT

ಶ್ರೀರಾಮ ನವಮಿ ಏ.13ರಂದು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:31 IST
Last Updated 12 ಏಪ್ರಿಲ್ 2019, 14:31 IST
ಹಾವೇರಿಯ ರಾಮಮಂದಿರದಲ್ಲಿರುವ ಸೀತೆ, ರಾಮ, ಲಕ್ಷ್ಮಣ ವಿಗ್ರಹಗಳು
ಹಾವೇರಿಯ ರಾಮಮಂದಿರದಲ್ಲಿರುವ ಸೀತೆ, ರಾಮ, ಲಕ್ಷ್ಮಣ ವಿಗ್ರಹಗಳು   

ಹಾವೇರಿ:ಶ್ರೀ ರಾಮ ನವಮಿ ಅಂಗವಾಗಿ ನಗರದ ರಾಮ ಮಂದಿರದಲ್ಲಿ ಏ.13ರಂದು ಅಭಿಷೇಕ, ರುದ್ರಾಭಿಷೇಕ, ರೇಷ್ಮೆ ವಸ್ತೃ, ಆಭರಣದ ಅಲಂಕಾರ, ಜನ್ಮೋತ್ಸವ, ಬೆಳ್ಳಿ ತೊಟ್ಟಿಲೊತ್ಸವ, ಪಲ್ಲಕ್ಕಿ ಉತ್ಸವ, ರಾಮ ಕಥಾ ಪುರಾಣ, ಉಪವಾಸ ಆಚರಣೆ ನಡೆಯಲಿದೆ.

ಯುಗಾದಿ ಹಬ್ಬದ ದಿನ ರಾಮಮಂದಿರದಲ್ಲಿ ಘಟ ಸ್ಥಾಪನೆ ಹಾಗೂ ದೀಪ ಸ್ಥಾಪನೆ ಮಾಡಲಾಗುತ್ತದೆ. ಬಳಿಕ ಒಂಬತ್ತು ದಿನದವರೆಗೆ ವಿಶೇಷ ಪೂಜೆ, ಭಜನೆಗಳು ನಡೆಯುತ್ತವೆ. ನಗರದಲ್ಲಿರುವ ಏಕೈಕ ರಾಮಮಂದಿರ ಇದಾಗಿದ್ದು, ಇದು 1898ರಲ್ಲಿ ಸ್ಥಾಪಿಸಲಾಗಿದೆ. ಹನುಮಂತ ಬಾದಾಮಿ ನಾಯಕ ಇಲ್ಲಿನ ಪ್ರಮುಖರಾಗಿದ್ದಾರೆ ಎಂದು ದೇವಸ್ಥಾನ ಪುರೋಹಿತ ದತ್ತಾತ್ರೇಯ ಕಳ್ಳಿಹಾಳ ತಿಳಿಸಿದರು.

ರಾಮ, ಲಕ್ಷ್ಮಣ, ಸೀತೆಯ ಮತ್ತು ಹನುಮಂತನ ಮೂರ್ತಿಯು ಸಾಮಾನ್ಯವಾಗಿ ಕಪ್ಪು ಶಿಲೆಯಲ್ಲಿ ಇರುತ್ತದೆ. ಆದರೆ ನಗರದಲ್ಲಿರುವ ಮಂದಿರದ ಮೂರ್ತಿಗಳು ಶ್ವೇತ ಶಿಲೆಗಳಿಂದ ಕೆತ್ತನೆ ಮಾಡಲಾಗಿದೆ. ಈ ಮೂರ್ತಿಗಳನ್ನು ರಾಜಸ್ಥಾನದ ಜೈಪುರದಿಂದ ತರಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ರಾಮ ನವಮಿ ತಿಥಿ, ಪುನರ್ವಸು ನಕ್ಷತ್ರದಲ್ಲಿ ಜನಿಸಿದ್ದರು. ಆದರೆ ಈ ಬಾರಿ ಎಂಟನೇ ದಿನಕ್ಕೆ ನವಮಿ ತಿಥಿ, ಪುನರ್ವಸು ಬಂದಿದ್ದು, ರಾಮ ನವಮಿ ಆಚರಿಸಲಾಗುತ್ತಿದೆ. ನಿತ್ಯ ಜಲಾಭಿಷೇಕ ನಡೆಯುತ್ತದೆ. ವಿಶೇಷ ಸಂದರ್ಭದಲ್ಲಿ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.