ADVERTISEMENT

ಖಾಲಿ ಚೊಂಬಿನ ಕುರಿತ ಚರ್ಚೆಗೆ ಸ್ಥಳ, ದಿನಾಂಕ ಬಿಜೆಪಿ ನಿಗದಿಪಡಿಸಲಿ– ಕಾಂಗ್ರೆಸ್‌

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 15:44 IST
Last Updated 24 ಏಪ್ರಿಲ್ 2024, 15:44 IST
ರಣದೀಪ್ ಸಿಂಗ್ ಸುರ್ಜೇವಾಲಾ
ರಣದೀಪ್ ಸಿಂಗ್ ಸುರ್ಜೇವಾಲಾ   

ಹಾವೇರಿ: ‘ರಾಜ್ಯಕ್ಕೆ ಬರಬೇಕಾದ ₹18 ಸಾವಿರ ಕೋಟಿ ಬರ ಪರಿಹಾರ ನೀಡದೇ ಚೊಂಬು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಪವಿತ್ರ ಭೂಮಿ ಕರುನಾಡಿನಲ್ಲಿ ಕಾಲಿಡಲು ಯಾವುದೇ ಹಕ್ಕು ಇಲ್ಲ. ರಾಜ್ಯದ ಜನರ ಬಳಿ ಮತ ಕೇಳಲು ಯಾವುದೇ ನೈತಿಕತೆ ಇಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ವಾಗ್ದಾಳಿ ನಡೆಸಿದರು. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ತೆರಿಗೆ ಕಟ್ಟಿರುವ ಕನ್ನಡಿಗರಿಗೆ ಕೊಡಬೇಕಾದ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಪ್ರಧಾನಿ ಮೋದಿ ಅವರಲ್ಲಿ ಭಿಕ್ಷೆ ಬೇಡುತ್ತಿಲ್ಲ. 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಬರ ಘೋಷಿಸಿದೆ. ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ₹18 ಸಾವಿರ ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಪರಿಹಾರ ನೀಡಿದ ನಂತರ ಕರ್ನಾಟಕಕ್ಕೆ ಓಟು ಕೇಳಲು ಬನ್ನಿ ಎಂದು ಕುಟುಕಿದರು. 

ಕರ್ನಾಟಕಕ್ಕೆ ಅನ್ಯಾಯ ಮಾಡುವುದೇ ಮೋದಿ ಸರ್ಕಾರದ ಡಿಎನ್‌ಎ. ಕೇಂದ್ರ ಸರ್ಕಾರದ ತಾರತಮ್ಯದ ಬಗ್ಗೆ ಕನ್ನಡಿಗರಲ್ಲಿ ಆಕ್ರೋಶ ಮಡುಗಟ್ಟಿದೆ. ಮೋದಿ ಮತ್ತು ಅಮಿತ್‌ಶಾಗೆ ಗೋ ಬ್ಯಾಕ್‌ ಎಂದು ಕನ್ನಡಿಗರು ಹೇಳುವ ವಾತಾವರಣ ಉಂಟಾಗಿದೆ. ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಮೋದಿಯವರು ಅನುಮತಿ ಕೊಡಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ₹6 ಸಾವಿರ ಕೋಟಿ ಬಿಡುಗಡೆ ಮಾಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ₹100 ತೆರಿಗೆ ಕೊಟ್ಟರೆ ಅಲ್ಲಿಂದ ರಾಜ್ಯಕ್ಕೆ ಕೇವಲ ₹13 ವಾಪಸ್ ಕೊಡುತ್ತಿದ್ದಾರೆ ಎಂದು ಟೀಕಿಸಿದರು. 

ADVERTISEMENT

‘ಜನ ತಿರಸ್ಕರಿಸಿದ ನಾಯಕ ಬೊಮ್ಮಾಯಿ’

ಬಸವರಾಜ ಬೊಮ್ಮಾಯಿ ನೇತೃತ್ವದ 40 ಪರ್ಸೆಂಟ್‌ ಸರ್ಕಾರವನ್ನು ಜನರೇ ಕಿತ್ತೊಗೆದಿದ್ದಾರೆ. ಕರ್ನಾಟಕದ ಜನರಿಂದ ತಿರಸ್ಕೃತನಾದ ನಾಯಕ ಬೊಮ್ಮಾಯಿ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲಾ ಕುಟುಕಿದರು.  ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮತ್ತು ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಗ್ಯಾರಂಟಿ ಯೋಜನೆಗಳೇ ಅಭಿವೃದ್ಧಿಯ ಮಾದರಿಗಳಾಗಿವೆ. ಮಧ್ಯವರ್ತಿಗಳ ಹಾವಳಿಯಿಲ್ಲದೇ ಫಲಾನುಭವಿಗಳಿಗೆ ಖಾತೆಗೆ ನೇರವಾಗಿ ಹಣ ಹೋಗುತ್ತಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲ. ಕರ್ನಾಟಕದ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದರು. 

‘ಖಾಲಿ ಚೊಂಬಿನ ಬಗ್ಗೆ ಚರ್ಚೆಗೆ ಸಿದ್ಧ'

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಇಲ್ಲ. ಇಲ್ಲಿ ಕೇವಲ ಎರಡು ಅಂಗಡಿ ನಡೆಯುತ್ತಿವೆ. ಒಂದು ಬಿ.ಎಸ್.ಯಡಿಯೂರಪ್ಪ ಮತ್ತು ಮಕ್ಕಳು ಹಾಗೂ ಮತ್ತೊಂದು ಎಚ್.ಡಿ. ಕುಮಾರಸ್ವಾಮಿ ಬ್ರದರ್ಸ್ ಮತ್ತು ಕುಟುಂಬದ ಅಂಗಡಿ. ಈ ಬಗ್ಗೆ ಬೇಕಾದರೆ ಯತ್ನಾಳ ಅವರನ್ನು ಕೇಳಿ. ಬಿಜೆಪಿಯ ಖಾಲಿ ಚೊಂಬಿನ ಬಗ್ಗೆ ಚರ್ಚೆಗೆ ಆಹ್ವಾನಿಸುತ್ತೇವೆ. ನಾವು ನಮ್ಮ ಸಿಎಂ ಡಿಸಿಎಂ ಕರೆದುಕೊಂಡು ಬರುತ್ತೇವೆ. ಸ್ಥಳ ಮತ್ತು ದಿನಾಂಕವನ್ನು ಅವರೇ ನಿಗದಿಪಡಿಸಲಿ ಎಂದು ಸುರ್ಜೇವಾಲಾ ಸವಾಲು ಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.