ರಾಣೆಬೆನ್ನೂರು: ತಾಲ್ಲೂಕಿನ ಚಳಗೇರಿ ಗ್ರಾಮವು ನಗರದಿಂದ 6 ಕಿಮೀ., ಅಂತರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ - 48 ಬಳಿ ಇದೆ. 8 ಸಾವಿರಕ್ಕೂ ಜನಸಂಖ್ಯೆ ಹೊಂದಿದ್ದು, 19 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ ಮೂಲಸೌಲಭ್ಯದಿಂದ ವಂಚಿತವಾಗಿದೆ.
ಚಳಗೇರಿಯಿಂದ ಕರೂರು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಬೈಕ್ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ವಿದ್ಯಾನಗರದ ವಿಠ್ಠಲ ದೇವಸ್ಥಾನದ ಬಳಿ ದಾರಿ ಮಧ್ಯೆ 2 ವರ್ಷದ ಹಿಂದೆ ಬೋರ್‌ವೆಲ್ ಕೊರೆಸಿ ಗುಂಡಿ ತೋಡಿದ್ದು ಮುಚ್ಚದೇ ಹಾಗೆ ಬಿಟ್ಟಿದ್ದಾರೆ. ಈ ಬಗ್ಗೆ ಪಿಡಿಒಗೆ ಮನವಿ ಮಾಡಿದರೂ ಕ್ರಮಕೈಗೊಂಡಿಲ್ಲ ಎಂದು ಶ್ರೀಧರ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಮಹಡಿ ಮೇಲೆ ಇದ್ದು ಸ್ಟೇರ್ ಕೇಸ್ ಚಿಕ್ಕದಾಗಿದೆ. ಹತ್ತಲು ಇಳಿಯಲು ತೊಂದರೆಯಾಗಿ ಉಪಯೋಗಕ್ಕೆ ಬಾರದಂತಾಗಿದೆ. ಪುಸ್ತಕಗಳು ದೂಳು ಹಿಡಿದಿವೆ. ಒಂದು ದಿನವೂ ಇಲ್ಲಿ ಸಾರ್ವಜನಿಕರು ಪತ್ರಿಕೆ ಓದಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ತೆರೆಯದ ಘನ ತ್ಯಾಜ್ಯ ಘಟಕ: ಗ್ರಾಮ ಪಂಚಾಯಿತಿಯಿಂದ ಲಕ್ಷಾಂತರ ಹಣ ಖರ್ಚು ಮಾಡಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಿದ್ದಾರೆ. ನಿರ್ವಹಣೆ ಇಲ್ಲದೇ ಅನೇಕ ದಿನಗಳಿಂದ ಬಾಗಿಲು ಮುಚ್ಚಿದೆ.
‘ಜನತೆ ಹಸಿ ಕಸ ಒಣ ಕಸ ಬೇರ್ಪಡಿಸಿಕೊಡಲ್ಲ. ಗ್ರಾಮ ಪಂಚಾಯಿತಿಯಿಂದ ಕೊಟ್ಟ ಬಕೇಟ್‌ಗಳನ್ನು ಬಟ್ಟೆ ತೊಳೆಯಲು ಬಳಸುತ್ತಾರೆ. ಹಾಗಾಗಿ ಘನ ತ್ಯಾಜ್ಯ ಘಟಕ ನಿರ್ಹವಣೆಯಲ್ಲಿ ಅನಾನುಕೂಲವಾಗಿದೆ’ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ತಿಳಿಸಿದರು.
ಗ್ರಾಮದ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು, ಚರಂಡಿ ಸ್ವಚ್ಛಗೊಳಿಸಿಲ್ಲ. ಸೊಳ್ಳೆಗಳ ಕಾಟ ಹೇಳತೀರದು. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಾಗಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಯಂತ್ರಗಳು ತುಕ್ಕು ಹಿಡಿದಿವೆ. ದುರಸ್ತಿ ಕಾಣದೇ ಹಾಳು ಬಿದ್ದಿವೆ.
ಚಳಗೇರಿ ಸೇರಿದಂತೆ 30 ಗ್ರಾಮಗಳಿಗೆ ಕರ್ಲಗೇರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 2 ವಾರಕ್ಕೊಮ್ಮೆ ನದಿ ನೀರು ಬಿಡಲಾಗುತ್ತದೆ. ಈ ಯೋಜನೆ ತೀರಾ ಹಳೆಯದಾಗಿದ್ದು, ಪೈಪುಲೈನುಗಳು ನೀರಿನ ಒತ್ತಡಕ್ಕೆ ಪೈಪುಗಳು ಹಗಲೆಲ್ಲ ಕೀಳುತ್ತವೆ. ಪೈಲ್ ಲೈನ್ ದುರಸ್ಥಿಗೆ ಬಂದಾಗ 20 ದಿನಗಳಿಗೆ ಕುಡಿಯುವ ನೀರು ಬಿಡುವುದರಿಂದ ತೊಂದರೆ ಅನುಭವಿಸುವಂತಾಗಿದೆ.
ಜೆಜೆಎಂ ಯೋಜನೆಗೆ ಹಾಕಿದ ನಲ್ಲಿ ಮುರಿದು ಬಿದ್ದಿದ್ದು, ನೀರಿನ ಮೀಟರ್ ಹಾಳು ಬಿದ್ದಿವೆ. ಗ್ರಾಮದಲ್ಲಿ 30 ಬೋರ್‌ವೆಲ್‌ಗಳಿಂದ ಬಳಸುವ ನೀರು ಪೂರೈಕೆ ಮಾಡಲಾಗುತ್ತದೆ. ಮನೆ ಮನೆಗೆ ಗಂಗೆ ನೀರಿನ ಯೋಜನೆಗೆ ಓವರ್ ಹೆಡ್ ಟ್ಯಾಂಕನಿಂದ ನೀರು ಏರಿಸಿ ಟೆಸ್ಟ್ ಮಾತ್ರ ಮಾಡಲಾಗಿದೆ. ಜೆಜೆಎಂ ಅವರಿಗೆ ಗ್ರಾಮ ಪಂಚಾಯಿತಿಯಿಂದ ನೀರು ಕೊಟ್ಟಿಲ್ಲ. ಹುಣಸೀಕಟ್ಟಿ ರಸ್ತೆಯಲ್ಲಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ನೀರು ಕೊಟ್ಟರೆ, ಜೆಜೆಎಂ ಯೋಜನೆಯು ಯಶಸ್ವಿಯಾಗಲಿದೆ ಎನ್ನುತ್ತಾರೆ ಗ್ರಾಮದ ಪ್ರಮುಖರಾದ ಭರಮನಗೌಡ ಕರೂರು.
ಚಳಗೇರಿಯಿಂದ ಹರಿಹರಕ್ಕೆ ಹೋಗುವ ಸವೀರ್ಸ್ ರಸ್ತೆಯ ಬಳಿ ಇರುವ ಬಸ್ ನಿಲ್ದಾಣವು ಅನಾಥರು ತಂಗುವ ತಾಣವಾಗಿದೆ. ಜೂಜಾಟದ ತಾಣವೂ ಆಗಿದೆ.
ಚಳಗೇರಿಯಿಂದ ರಾಣೆಬೆನ್ನೂರು ಕಡೆಗೆ ಹೋಗುವ ಕ್ರಾಸ್ ಬಳಿ ಬಸ್ ನಿಲ್ದಾಣವಿಲ್ಲದ ಕಾರಣ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಪ್ರಯಾಣಿಕರು ನಿಲ್ಲಲು ಗ್ಯಾರೇಜು, ಬೀಡಾ ಅಂಗಡಿ ಅವಲಂಬಿಸಿದ್ದಾರೆ.
ಗ್ರಾಮದಲ್ಲಿ ಮಹಿಳೆಯರು ಇನ್ನು ಹೊಲ, ರಸ್ತೆ ಬದಿಗೆ ಬಯಲು ಶೌಚಾಲಯಕ್ಕೆ ಹೋಗುವ ಪದ್ದತಿ ಈಗಲೂ ಇದೆ. ಸಾರ್ವಜನಿಕ ಶೌಚಾಲಯಗಳಿಲ್ಲ. ಶೌಚಾಲಯ ಕಟ್ಟಿಸಿಕೊಂಡವರು ಅದರಲ್ಲಿ ಬಳಕೆಯಾಗದ ಸಾಮಗ್ರಿಗಳನ್ನು ಇಟ್ಟಿದ್ದಾರೆ.
ಚಳಗೇರಿ ಗ್ರಾಮ ಮೂಲಸೌಲಭ್ಯದಿಂದ ವಂಚಿತವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗ್ರಾಮದ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲಿನ ಜನರ ಒತ್ತಾಸೆಯಾಗಿದೆ.
ಬಹುಗ್ರಾಮ ಯೋಜನೆಯಿಂದ ಚಳಗೇರಿ ಮತ್ತು ಕರೂರು ಗ್ರಾಮಕ್ಕೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆವೆಂಕಟೇಶ. ಪಿಡಿಒ ಚಳಗೇರಿ.
ಚಳಗೇರಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕುಡಿಯುವ ನೀರು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದುಪರಮೇಶ ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.