ADVERTISEMENT

ರಾಣೆಬೆನ್ನೂರ | 'ಗೋಮಾಳ, ಕೆರೆಕಟ್ಟೆ ಸಂರಕ್ಷಣೆ ಮಾಡಿ'

ಅಂತರರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:15 IST
Last Updated 16 ಡಿಸೆಂಬರ್ 2025, 2:15 IST
ರಾಣೆಬೆನ್ನೂರು ನಗರದ ತಾಲ್ಲೂಕು ಪಂಚಾಯತಿ ಸಭಾಭವನದಲ್ಲಿ ಗುರುವಾರ ಜರುಗಿದ ಅಂತರರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆಯ ಸಮ್ಮೇಳನದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಸಣ್ಣಬಿದರಿ ಮಾತನಾಡಿದರು
ರಾಣೆಬೆನ್ನೂರು ನಗರದ ತಾಲ್ಲೂಕು ಪಂಚಾಯತಿ ಸಭಾಭವನದಲ್ಲಿ ಗುರುವಾರ ಜರುಗಿದ ಅಂತರರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆಯ ಸಮ್ಮೇಳನದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಸಣ್ಣಬಿದರಿ ಮಾತನಾಡಿದರು   

ರಾಣೆಬೆನ್ನೂರ: ಸಾಮೂಹಿಕ ಆಸ್ತಿಗಳಾದ ಅರಣ್ಯ, ಗೋಮಾಳ, ಹುಲ್ಲು ಬನ್ನಿ, ಕೆರೆ, ಗೋಕಟ್ಟೆಗಳನ್ನು ಸಂರಕ್ಷಣೆ ಮಾಡುವುದರೊಂದಿಗೆ ಪುನರುಜ್ಜೀವನ ಗೊಳಿಸುವ ಜವಾಬ್ದಾರಿ ಸಮುದಾಯದ ಮೇಲೆ ಇದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಸಣ್ಣಬಿದರಿ ಕರೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಹಾವೇರಿ, ತಾಲೂಕ ಪಂಚಾಯಿತಿ ರಾಣೇಬೆನ್ನೂರ್ ಮತ್ತು ಫೌಂಡೇಶನ್ ಫಾರ್ ಇಕಾಲಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಅಂತರರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಮುಂದಿನ ಯುವ ಪೀಳಿಗೆ ಮತ್ತು ನಮ್ಮ ಜಾನುವಾರುಗಳು ಉಪಕಸಬುಗಳು ಉಳಿಯಬೇಕಾದರೆ ಸಮುದಾಯದವರು ಸಮುದಾಯದ ಆಸ್ತಿಗಳನ್ನು ರಕ್ಷಣೆ ಮಾಡುವುದು ಅಗತ್ಯವಿದೆ ಎಂದು ತಿಳಿಸಿದರು.

ಫೌಂಡೇಶನ್ ಫಾರ್ ಇಕಾಲಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಜಿಲ್ಲಾ ಸಂಯೋಜಕ ಪ್ರಕಾಶ್ ಲಂಬಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷ ಡಿಸೆಂಬರ್ ಮೊದಲನೇ ವಾರದಲ್ಲಿ ಮೂರು ದಿನಗಳವರೆಗೆ ನಡೆಯುವ ಅಂತರರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆ ಮತ್ತು ಅರಣ್ಯೀಕರಣ, ಗೋಮಾಳ ಅಭಿವೃದ್ಧಿ, ಜಲ ಸಂರಕ್ಷಣೆ ಮಾಡಿದ ಸಮುದಾಯವನ್ನು ಗುರುತಿಸಿ ಅವರ ಅನುಭವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಳ್ಳುವ ಕಾರ್ಯಕ್ರಮವಾಗಿದೆ ಎಂದು ಸಮಗ್ರವಾಗಿ ಮಾಹಿತಿ ನೀಡಿದರು.

ADVERTISEMENT

ಪ್ರತಿವರ್ಷದಂತೆ ಈ ವರ್ಷ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗೋಡ ಗ್ರಾಮದ ಗೋಮಾಳ ಉಳಿಸಿ ಹೋರಾಟ ಸಮಿತಿಯನ್ನು ಗುರುತಿಸಿ ಆಯ್ಕೆ ಮಾಡಿ ಅವರ ಅನುಭವವನ್ನು ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೋಮಾಳ ಉಳಿವಿಗಾಗಿ ಹೋರಾಟ ಮಾಡಿದ ರೂಪರೇಷೆಗಳ ಕುರಿತು ವಿಡಿಯೋ ಸಂವಾದದ ಮೂಲಕ ಅನುಭವವನ್ನು ಹಂಚಿಕೊಳ್ಳಲಾಯಿತು.

ಬೇರೆ ಬೇರೆ ರಾಜ್ಯದವರು ಅರಣ್ಯೀಕರಣ, ಜಲ ಸಂರಕ್ಷಣೆ, ಉಪಕಸುಬುಗಳ ಪುನರುಜ್ಜೀವನ ಗೋಮಾಳ
ಒತ್ತುವರಿ ತೆರವುಗೊಳಿಸುವ ಯಶೋಗಾಥೆಗಳನ್ನು ಸಮುದಾಯದವರೇ ಹಂಚಿಕೊಂಡರು. ಇದರ ಉದ್ದೇಶ ಸಾಮೂಹಿಕ ಆಸ್ತಿಗಳ ರಕ್ಷಣೆ, ಪ್ರೇರಣೆ ಮತ್ತು ಪುನಶ್ಚೇತನ ಗೊಳಿಸುವುದಾಗಿದೆ ಎಂದರು.

ಇಟಗಿ ಗ್ರಾಮ ಪಂಚಾಯಿತಿ  ಸದಸ್ಯರು, ಮಾಗೋಡ ಗ್ರಾಮದ ಗೋಮಾಳ ಉಳಿಸಿ ಹೋರಾಟ ಸಮಿತಿ ಸದಸ್ಯರು, ನರೇಗಾ ಸಹಾಯಕ ನಿರ್ದೇಶಕ ವಿಜಯಕುಮಾರ್ ಆನಗೋಡಿಮಠ, ಪಿಡಿಒ ಜಿ.ಜಿ.ನಾಯಕ, ತಾಲೂಕ ಐಇಸಿ ಸಂಯೋಜಕ ದಿಂಗಾಲೇಶ ಅಂಗೂರ, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮಹಿಳಾ ಪ್ರತಿನಿಧಿಗಳು ಗ್ರಾಮಸ್ಥರು ಸದರಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.