ADVERTISEMENT

ರಾಣೆಬೆನ್ನೂರು: ಅಭಿವೃದ್ಧಿ ಕಾಣದ ಕೆಎಚ್‌ಬಿ ಬಡಾವಣೆ

45 ಎಕರೆ 12 ಗುಂಟೆಯಲ್ಲಿ ನಿರ್ಮಿಸಿರುವ ನಿವೇಶನಗಳು | ನಗರಸಭೆಗೆ ಹಸ್ತಾಂತರವಾಗದ ಪ್ರದೇಶ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:15 IST
Last Updated 13 ಡಿಸೆಂಬರ್ 2025, 4:15 IST
ರಾಣೆಬೆನ್ನೂರಿನಲ್ಲಿರುವ ಕೆಎಚ್‌ಬಿ ಮೊದಲ ಹಂತದ ಬಡಾವಣೆಯ ರಸ್ತೆಗಳು ಹಾಳಾಗಿರುವುದು
ರಾಣೆಬೆನ್ನೂರಿನಲ್ಲಿರುವ ಕೆಎಚ್‌ಬಿ ಮೊದಲ ಹಂತದ ಬಡಾವಣೆಯ ರಸ್ತೆಗಳು ಹಾಳಾಗಿರುವುದು   

ರಾಣೆಬೆನ್ನೂರು: ಇಲ್ಲಿಯ ಮಾಗೋಡ ರಸ್ತೆಯಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ವತಿಯಿಂದ ಮೊದಲ ಹಂತದಲ್ಲಿ ನಿರ್ಮಿಸಿರುವ ಬಡಾವಣೆಯ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಮೂಲ ಸೌಕರ್ಯವಿಲ್ಲದೇ ನಿವಾಸಿಗಳು ಯಾತನೆ ಅನುಭವಿಸುತ್ತಿದ್ದಾರೆ.

ಸ್ಥಳೀಯ ನಗರಸಭೆಯಿಂದ ಅಮೃತ ಸಿಟಿ ಯೋಜನೆಗೆ ಒಳಪಟ್ಟರೂ ಬಡಾವಣೆ ಅಭಿವೃದ್ಧಿಯಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ವೇ ನಂಬರ್ 861, 864 ಮತ್ತು 865ರ 45 ಎಕರೆ 12 ಗುಂಟೆಯಲ್ಲಿ ನಿವೇಶನಗಳನ್ನು ನಿರ್ಮಿಸಲಾಗಿದೆ. ಬಹುತೇಕ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಮಂಡಳಿ ನಿರ್ಲಕ್ಷ್ಯ ತೋರುತ್ತಿದೆ.

ಬಡಾವಣೆಯ ಮೊದಲ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಮನವಿಗೂ ಸ್ಪಂದನೆ ಸಿಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.

ADVERTISEMENT

‘ಶುದ್ಧ ಕುಡಿಯುವ ನೀರು, ಗುಣಮಟ್ಟದ ರಸ್ತೆ, ಚರಂಡಿ, ಸರ್ಕಾರಿ ಶಾಲೆ, ಉದ್ಯಾನ, ದೇವಸ್ಥಾನ ನಿರ್ಮಾಣ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಂಘ ಮಾಡಿಕೊಂಡು 2022ರಿಂದ ಹೋರಾಟ ಮಾಡುತ್ತಿದ್ಧೆವೆ. ಆದರೆ, ಸೌಲಭ್ಯ ಮಾತ್ರ ಸಿಗುತ್ತಿಲ್ಲ’ ಎಂದು ಪದಾಧಿಕಾರಿಗಳು ಬೇಸರ ಹೊರಹಾಕಿದರು.

‘ಮೊದಲ ಹಂತದ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಲು ಕೆಎಚ್‌ಬಿ ಯೋಜನಾ ಕಚೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮತ್ತು ನಗರಸಭೆಯ ಪೌರಾಯುಕ್ತರು ಪರಸ್ಪರ ಒಪ್ಪಿಕೊಂಡಿದ್ದರು. ₹ 2 ಕೋಟಿ ವಂತಿಗೆ ಪಾವತಿಸಲು ಚೆಕ್‌ ನೀಡಿದ್ದರು. ಆಗಿನ ನಗರಸಭೆ ಆಡಳಿತ ಮಂಡಳಿ, ಹಸ್ತಾಂತರಕ್ಕೆ ಒಪ್ಪಿರಲಿಲ್ಲ. ಹೀಗಾಗಿ, ಕೆಎಚ್‌ಬಿಗೆ ಚೆಕ್‌ ವಾಪಸು ನೀಡಲಾಗಿದೆ. ಅಂದಿನಿಂದ ಇಂದಿನವರೆಗೂ ಬಡಾವಣೆ ಹಸ್ತಾಂತರವಾಗಿಲ್ಲ. ಅಭಿವೃದ್ಧಿಯೂ ಆಗುತ್ತಿಲ್ಲ’ ಎಂದು ಪದಾಧಿಕಾರಿಗಳು ಹೇಳಿದರು.

‘ನಗರಾಭಿವೃದ್ದಿ ಪ್ರಾಧಿಕಾರದಿಂದ ಕೆಜೆಪಿ ಅನುಮೋದನೆಗಾಗಿ ಮನವಿ ಮಾಡಲಾಗಿತ್ತು. ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಶುಲ್ಕ ತುಂಬಲು ಹಾವೇರಿ ಕೆಎಚ್‌ಬಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಹಣ ಪಾವತಿಸಲು ಬೆಂಗಳೂರಿನ ಆಯುಕ್ತರು ಆದೇಶ ಮಾಡಿದ್ದಾರೆ. ರಾಣೆಬೆನ್ನೂರು ಪ್ರಾಧಿಕಾರಕ್ಕೆ ಹಣ ತುಂಬಿದ ನಂತರ ಎಡಿಎಲ್‌ಆರ್‌ ಮುಗಿದು ಕೆಜೆಪಿ ಅನುಮೋದನೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಸಂಘದ ಅಧ್ಯಕ್ಷ ಬಸವರಾಜ ಬಡಿಗೇರ ಹಾಗೂ ಕಾರ್ಯದರ್ಶಿ ವಿರುಪಾಕ್ಷಪ್ಪ ಅರವಂಟಿಗಿ ತಿಳಿಸಿದರು.

‘2009ರಲ್ಲಿ ನಿವೇಶನಗಳು ಮಂಜೂರಿಯಾಗಿವೆ. 16 ವರ್ಷಗಳಿಂದ ಮೂಲ ಸೌಲಭ್ಯವಿಲ್ಲದೇ ಜೀವನ ನಡೆಸುತ್ತಿದ್ದೇವೆ. ನಗರಸಭೆಯಿಂದ ಕಸ ತೆಗೆದುಕೊಂಡು ಹೋಗಲು ವಾರದಲ್ಲಿ ಎರಡು ಬಾರಿ ಮಾತ್ರ ಬರುತ್ತಾರೆ. ಅದನ್ನು ಬಿಟ್ಟರೆ ಯಾವುದೇ ಸೌಲಭ್ಯವಿಲ್ಲ. ಹದಗೆಟ್ಟ ರಸ್ತೆ, ಹಾಳಾದ ಚರಂಡಿ, ಪಾಳು ಬಿದ್ದ ಉದ್ಯಾನ.... ಹೀಗೆ ನಾನಾ ಸಮಸ್ಯೆಗಳಿವೆ’ ಎಂದು ನಿವಾಸಿಗಳಾದ ನಿರುಪಮಾ ಮಣ್ಣಬಸಣ್ಣನವರ ಹಾಗೂ ಉಷಾ ಅಂತ್ರದ ದೂರಿದರು.

ಎಫ್‌.ವೈ. ಇಂಗಳಗಿ
ಕೆಎಚ್‌ಬಿಯಿಂದ ಪ್ರಾಧಿಕಾರಕ್ಕೆ ಶುಲ್ಕ ತುಂಬಬೇಕು. ಬಳಿಕವೇ ಕೆಜಿಪಿ ನಕ್ಷೆಯಾಗುತ್ತದೆ. ನಗರಸಭೆಯ ಶುಲ್ಕವನ್ನೂ ಪಾವತಿಸಿದ ನಂತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು 
ಎಫ್‌.ವೈ. ಇಂಗಳಗಿ ನಗರಸಭೆ ಪೌರಾಯುಕ್ತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ 
‘ಬಸ್‌ ಸೌಲಭ್ಯವಿಲ್ಲ’
‘ನಮ್ಮ ಬಡಾವಣೆಗೆ ಸೂಕ್ತ ಬಸ್‌ ಸೌಲಭ್ಯವಿಲ್ಲ. ನಿವಾಸಿಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ರಾಣೆಬೆನ್ನೂರಿಗೆ ಹೋಗಲು ಟಂಟಂನಲ್ಲಿ ಸಂಚರಿಸುತ್ತಿದ್ದಾರೆ. ವಾಕರಸಾಸಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಒಂದೂ ಬಸ್ ಬಿಟ್ಟಿಲ್ಲ. ದೂರದ ಊರಿನ ಬಸ್‌ಗಳು ಬಡಾವಣೆಯಲ್ಲಿ ನಿಲುಗಡೆ ಮಾಡುವುದಿಲ್ಲ’ ಎಂದು ನಿವಾಸಿಗಳು ದೂರಿದರು.  ಕುಡಿಯುವ ನೀರಿಗೂ ತೊಂದರೆ: ‘ತಾಲ್ಲೂಕಿನ ಮುದೇನೂರು ತುಂಗಭದ್ರಾ ನದಿಯಿಂದ ನಗರಕ್ಕೆ ಪೂರೈಕೆಯಾಗುವ ಮುಖ್ಯ ಪೈಪ್‌ ಲೈನ್‌ ಕೆಎಚ್‌ಬಿ ಬಡಾವಣೆಯ ಪಕ್ಕವೇ ಹಾದು ಹೋಗಿದೆ. ಅಷ್ಟಾದರೂ ಇದುವರೆಗೂ ನಗರಸಭೆಯಿಂದ ಬಡಾವಣೆಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. 16 ವರ್ಷಗಳಿಂದ ಕುಡಿಯಲು ಕೊಳವೆ ಬಾವಿ ನೀರೇ ಗತಿಯಾಗಿದೆ’ ಎಂದು ಎಂ.ಜೆ. ಹಿತ್ತಲಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.