
ರಾಣೆಬೆನ್ನೂರು: ಹೋಳಿ ಹಬ್ಬದ ಆಕರ್ಷಣೆ ಆಗಿರುವ ಇಲ್ಲಿಯ ಜೀವಂತ ರತಿ–ಮನ್ಮಥರ ಆಚರಣೆಯು 66ನೇ ವರ್ಷ ಪೂರ್ಣಗೊಳಿಸಿದ್ದು, ಈ ಬಾರಿ 67ನೇ ವರ್ಷದ ಆಚರಣೆಗೆ ಸಿದ್ಧತೆ ನಡೆದಿದೆ.
ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಮಲಿಂಗೇಶ್ವರ ಸೇವಾ ಸಮಿತಿ ಮತ್ತು ಶಕ್ತಿ ಯುವಕ ಸಂಘದ (ಜೆ.ಬಿ.ಸಿ.ಸಿ ಜೆಡ್) ಆಶ್ರಯದಲ್ಲಿ ಪ್ರತಿ ವರ್ಷ ಈ ಆಚರಣೆ ಹಮ್ಮಿಕೊಳ್ಳಲಾಗುತ್ತಿದೆ.
ಮಾರ್ಚ್ 3ರಂದು ಸಂಜೆ 7 ಗಂಟೆಗೆ ಜೀವಂತ ರತಿ–ಮನ್ಮಥರು ವೇದಿಕೆಯಲ್ಲಿ ಕೂರುವರು. ಇವರಿಬ್ಬರನ್ನು ನಗಿಸಿದವರಿಗೆ ಈ ಬಾರಿ ₹ 13 ಲಕ್ಷ ಮೊತ್ತದ ನಗದು ಬಹುಮಾನವಿದೆ.
ಕಾಮಣ್ಣನ ವೇಷದಲ್ಲಿ 47 ವರ್ಷದ, ಆಟೊ ಚಾಲಕ ಗದಿಗೆಪ್ಪ ರೊಡ್ಡನವರ (47), ರತಿ ವೇಷದಲ್ಲಿ 38 ವರ್ಷದ, ಕುಮಾರ ಹಡಪದ (38) ಇರುತ್ತಾರೆ. ಇವರನ್ನು ನಗಿಸಲು ವರ್ಷಗಳಿಂದ ಪ್ರಯತ್ನ ನಡೆದಿವೆ. ಆದರೆ, ಇವರಿಬ್ಬರೂ ನಕ್ಕಿಲ್ಲ.
‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ವಿಧಾನಸೌಧದಲ್ಲಿ ಪ್ರದರ್ಶನ ನೀಡಿದ್ದೆವು. ನಗಿಸಲು ಯತ್ನಿಸಿ ಹಲವರು ವಿಫಲರಾದರು. ಈ ಬಾರಿ ನಗಿಸಿದವರಿಗೆ ಸಮಿತಿಯಿಂದ ₹ 13 ಲಕ್ಷ ಬಹುಮಾನವಿದೆ. ಸಂಜೆ 7 ರಿಂದ ರಾತ್ರಿ 12 ಗಂಟೆಯವರೆಗೆ ಪ್ರದರ್ಶನ ಇರಲಿದೆ’ ಎಂದು ಗದಿಗೆಪ್ಪ ಮತ್ತು ಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.