ರಾಣೆಬೆನ್ನೂರು: ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಹಲವು ರೈತರು ಭತ್ತ ಬೆಳೆದಿದ್ದು, ಕಟಾವು ಶುರುವಾಗಿದೆ. ಆದರೆ, ಭತ್ತಕ್ಕೆ ಸೂಕ್ತ ಬೆಲೆ ಸಿಗದಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಉತ್ತಮ ಇಳುವರಿ ಪಡೆದಿರುವ ರೈತರು, ಭತ್ತವನ್ನು ಕಟಾವು ಮಾಡಿ ರಾಶಿ ಹಾಕಿದ್ದಾರೆ. ಆದರೆ, ನಿರೀಕ್ಷೆಗೆ ತಕಷ್ಟು ಬೆಲೆ ಸಿಕ್ಕಿಲ್ಲ.
ತಾಲ್ಲೂಕಿನ ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಕುದರಿಹಾಳ, ಹರನಗಿರಿ, ಉದಗಟ್ಟಿ, ಬೇಲೂರ, ಹೀಲದಹಳ್ಳಿ, ಮೇಡ್ಲೇರಿ, ಹಿರೇಬಿದರಿ, ಐರಣಿ, ನದೀಹರಳಹಳ್ಳಿ, ಮಾಕನೂರ, ಮುದೇನೂರ, ಕೋಟಿಹಾಳ, ಹೊಳೆ ಆನ್ವೇರಿ, ತುಮ್ಮಿನಕಟ್ಟಿ ಭಾಗದ ನದಿತೀರದ ಪ್ರದೇಶಗಳಲ್ಲಿ 5,500 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಕ್ವಿಂಟಲ್‌ಗೆ ₹ 2,600ರಿಂದ ₹3,300ವರೆಗೆ ದರವಿತ್ತು. ಕಳೆದ ಕೆಲ ದಿನಗಳಿಂದ ಭತ್ತದ ಬೆಲೆ ₹ 800ರಿಂದ ₹1,200ಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಕೆಯಾಗಿರುವುದರಿಂದ ರೈತರಿಗೆ ನಿರಾಸೆ ಮೂಡಿಸಿದೆ.
ಸದ್ಯಕ್ಕೆ ದರಕ್ಕೆ ಭತ್ತವನ್ನು ಮಾರಿದರೆ, ಬಿತ್ತನೆ ಮಾಡಿದ ಖರ್ಚು ಕೂಡ ಬರುವುದಿಲ್ಲವೆಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
‘ಬೇಸಿಗೆ ಭತ್ತ ಎಕರೆಗೆ 35ರಿಂದ 40 ಚೀಲ ಇಳುವರಿ ಬಂದಿದೆ. ಕನಿಷ್ಠ ₹ 2,500 ದರ ಸಿಕ್ಕರೆ ಖರ್ಚು ವೆಚ್ಚ ಸಮ ಆಗುತ್ತದೆ’ ಎಂದು ಮೇಡ್ಲೇರಿಯ ರೈತ ಗಣೇಶ ಬಿಲ್ಲಾಳ ಹೇಳಿದರು.
‘ತುಂಗಭದ್ರಾನದಿ ನೀರನ್ನು ಬಳಸಿ ಬೆಳೆಯುವ ಈ ಭಾಗದ ಭತ್ತಕ್ಕೆ ಬಹಳ ಬೇಡಿಕೆ ಇತ್ತು. ಆದರೆ, ಈ ಬಾರಿ ಭತ್ತದ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಭತ್ತದ ಬೆಳೆಗಾರರು ಕಂಗಾಲಾಗಿದ್ದಾರೆ. ಸ್ಥಳೀಯವಾಗಿ ಭತ್ತ ಖರೀದಿಗೆ ಕೇಂದ್ರವೂ ಇಲ್ಲ’ ಎಂದು ದೂರಿದರು.
‘ಪ್ರತಿ ಎಕರೆಗೆ ಭತ್ತ ಬೆಳೆಯಲು ಸುಮಾರು ₹ 30 ಸಾವಿರದಿಂದ ₹ 40 ಸಾವಿರ ಖರ್ಚಾಗುತ್ತದೆ. ರೈತರು ಭತ್ತ ಬೆಳೆಯಲು ಮಾಡಿದ ಸಾಲ ಕೂಡ ತೀರಿಸಲಾಗದಂಥ ಸ್ಥಿತಿ ಉಂಟಾಗಿದೆ. ಬೆಲೆ ಕಡಿಮೆಯಾಗಿದ್ದು ಒಂದಡೆಯಾದರೆ, ಭತ್ತ ಖರೀದಿಸಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಎರಡು–ಮೂರು ದಿನಗಳಿಂದ ರಾಶಿ ಕಾಪಾಡುವುದೇ ಕೆಲಸವಾಗಿದೆ’ ಎಂದು ನಲವಾಗಿಲ ರೈತ ಪರಮೇಶಪ್ಪ ಚಿಣ್ಣನವರ ಹೇಳಿದರು.
ಬೆಂಬಲ ಬೆಲೆ ಯೋಜನೆಯಿಲ್ಲ: ಮುಂಗಾರು ಹಂಗಾಮಿನಲ್ಲಿ ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು ತಾಲ್ಲೂಕಿನಲ್ಲಿ ಭತ್ತದ ಖರೀದಿ ಕೇಂದ್ರ ತೆರೆಯಲಾಗಿತ್ತು. ಮುಂಗಾರಿಗೆ ಖರೀದಿ ಕೇಂದ್ರದಲ್ಲಿ 282 ರೈತರು ನೋಂದಣಿ ಮಾಡಿಸಿದ್ದರು. ಆದರೆ, 32 ರೈತರು ಮಾತ್ರ ಭತ್ತ ಮಾರಿದ್ದಾರೆ.
ಈಗ, ಹಿಂಗಾರು ಹಂಗಾಮಿನಲ್ಲಿ ರಾಣೆಬೆನ್ನೂರಿನಲ್ಲಿ ಭತ್ತ ಬೆಳೆದ ಬಗ್ಗೆ ಜಿಪಿಎಸ್ ಮಾಡಿಸಿಲ್ಲ. ಹೀಗಾಗಿ, ಬೆಂಬಲ ಬೆಲೆ ಯೋಜನೆ ಜಾರಿಯಾಗಿಲ್ಲ. ದರ ಕುಸಿತವಾಗಿರುವುದರಿಂದ ಬೆಂಬಲ ಬೆಲೆಯೂ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೂರೈಕೆ ಹೆಚ್ಚಳದಿಂದ ಬೆಲೆ ಇಳಿಕೆ: ರಾಯಚೂರು, ಗಂಗಾವತಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದ ಭತ್ತ ಬೆಳೆಯಲಾಗಿದೆ. ಭತ್ತದ ಪೂರೈಕೆ ಹೆಚ್ಚಿರುವುದರಿಂದ ಬೆಲೆಯೂ ಇಳಿಕೆಯಾಗಿದೆ.
‘ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತವನ್ನು ಖರೀದಿಸಲು ಕೇಂದ್ರ ತೆರೆಯಬೇಕು. ರೈತರಿಗೆ ಸೂಕ್ತ ಬೆಲೆ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
ಕೇರಳ ಮಾದರಿಯಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ಕನಿಷ್ಠ ₹ 3500 ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರ ನೀಡುವ ವ್ಯಾಪಾರಸ್ಥರ ಪರವಾನಗಿ ರದ್ದುಪಡಿಸಬೇಕುಪರಮೇಶಪ್ಪ ಚಿನ್ನಣ್ಣನವರ ನಲವಾಗಲ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.