ರಾಣೆಬೆನ್ನೂರು: ನನ್ನ ಕರ್ಮಭೂಮಿ ಶಿವಮೊಗ್ಗ, ಜನ್ಮಭೂಮಿ ರಾಣೆಬೆನ್ನೂರಿಗೆ ಏನಾದರೂ ಕೊಡುಗೆ ಕೊಡಬೇಕು ಎಂದು ಸಂಕಲ್ಪ ಮಾಡಿದ್ದೆ. ಅದರಂತೆ 1971ರಲ್ಲಿ ಪಾಕಿಸ್ತಾನ- ಭಾರತದ ನಡುವೆ ಯುದ್ದದಲ್ಲಿ ವಿಜಯ ಪತಾಕೆ ಹಾರಿಸಿದ ಟಿ-55 ಯುದ್ದದ ಟ್ಯಾಂಕ್ ತರಲು ಕಳೆದ 2 ವರ್ಷಗಳಿಂದ ಪಟ್ಟ ಪರಿಶ್ರಮ ಸಾರ್ಥಕವಾಗಿದೆ ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ವೈದ್ಯ ಡಾ.ಚನ್ನು ಹಿರೇಮಠ ಹೇಳಿದರು.
ನಗರದಲ್ಲಿ ಶುಕ್ರವಾರ 1984ರ ಎಸ್‌ಎಸ್‌ಎಲ್‌ಸಿ ಗೆಳೆಯರ ಬಳಗದ ಪದಾಧಿಕಾರಿಗಳು ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯುದ್ಧ ಟ್ಯಾಂಕ್ ನಗರದ ಮಿನಿವಿಧಾನಸೌಧದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ದೇಶಭಕ್ತಿ ಮೆರೆಯಲಾಗಿದೆ ಎಂದರು.
‘ಟ್ಯಾಂಕ್‌ಗಳ ಪೂರೈಕೆಗಾಗಿ ಯುರೋಪ್ ದೇಶಗಳನ್ನು ಸಂಪರ್ಕಿಸಿತ್ತು. ಈ ಟಿ- 55 ಟ್ಯಾಂಕ್ ಅನ್ನು 1966- 1977ರಲ್ಲಿ ರಷ್ಯಾದಿಂದ ಖರೀದಿಸಿ ಅದಕ್ಕೆ ಶಿವಶಕ್ತಿ ಎಂದು ಹೆಸರಿಡಲಾಗಿತ್ತು. ಪುಣೆಯ ಭಾರತೀಯ ಸೇನೆಯ ಖಡಕ್ಕಿ ಯುದ್ದ ಸೇನಾ ವಾಹನ ಸಂಗ್ರಹಾಗಾರದಿಂದ ಆ.6 ರಂದು ಪಡೆಯಲಾಗಿದೆ. ಅಲ್ಲಿಂದ ರಾಣೆಬೆನ್ನೂರಿಗೆ ತರಲಾಗಿದೆ’ ಎಂದರು.
ಇಲ್ಲಿನ ಯುದ್ದ ಸ್ಮಾರಕರದ ಬಳಿ ಪ್ರತಿಷ್ಟಾಪಿಸುವ ವಿಚಾರವಿದೆ. ಈ ಟ್ಯಾಂಕ್ ತರಲು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಒತ್ತಡ ಹಾಕಿದ್ದೇವೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಶಿಫಾರಸ್ಸು ಮಾಡಿದ್ದರು. ಟ್ಯಾಂಕ್ ಮಂಜೂರು ಮಾಡುವಂತೆ ಶಾಸಕ ಪ್ರಕಾಶ ಕೋಳಿವಾಡ ಅವರ ಮೂಲಕ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು’ ಎಂದರು.
‘ಟ್ಯಾಂಕ್ ನೋಡಲು ಇವತ್ತು ಇಷ್ಟೊಂದು ಜನ ಸೇರಿದ್ದು, ನಮ್ಮ ಜನ್ಮ ಸಾರ್ಥಕವಾಯಿತು. ಯುದ್ದದ ಟ್ಯಾಂಕ್ ಸ್ಕ್ರ್ಯಾಪ್ (ಗುಜರಿ) ಅಲ್ಲ. ಯುದ್ಧ ವಿಜಯದ ಪಾರಿತೋಷಕ ಎನ್ನಲಾಗುತ್ತದೆ. ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಮ್ಮ ಎಸ್‌ಎಸ್‌ಎಲ್‌ಸಿ 1984ರ ಗೆಳೆಯರು ರಾಣೆಬೆನ್ನೂರಿಗೆ ಬರುವವರೆಗೂ ಸಹಕಾರ ನೀಡಿದ್ದಾರೆ’ ಎಂದು ಸ್ಮರಿಸಿದರು.
ಗಿರೀಶ ಬಳ್ಳಾರಿ, ಮಂಜುನಾಥ ಸಣ್ಣಿಂಗಣ್ಣನವರ, ನಾರಾಯಣ ಕೋಪರ್ಡೆ, ಕಾಂತೇಶ ನಾಯಕ, ಚಿಂತಾ, ನಾಗರಾಜ ಹನುಮರಡ್ಡಿ, ಗುರುಮಠ, ಮೇಲಗಿರಿ, ಗುಳೇದಗುಡ್ಡ ವಿಜಯ ಕಟ್ಟೀಮನಿ, ಫಕ್ಕಿರೇಶ ಬನ್ನಕೋಡ ಇದ್ದರು.
ಯುದ್ಧ ಟ್ಯಾಂಕಿನ ವಿಶೇಷ
ಯುದ್ಧ ಟ್ಯಾಂಕ್ 37 ಟನ್ ತೂಕವಿದ್ದು ನಾಲ್ವರು ಸಿಬ್ಬಂದಿ ಇರುತ್ತಾರೆ. 27 ಮೀಟರ್ ಕಂದಕ ದಾಟುವ ಸಾಮರ್ಥ್ಯ ಇದಕ್ಕೆ ಇದೆ. 0.8 ಮೀಟರ್ ಲಂಬ ವಾಲುವಿಕೆ ವಿ.ಆಕಾರದ 12 ಡಿಸೇಲ್ 12 ವರಳುಗಳು 4 ಟನ್ ನೇರ ತಣಿಸಬಹುದಾದ 500 ಆಶ್ವಶಕ್ತಿ ಹೊಂದಿದೆ. 1 ಗಂಟೆಗೆ ಗರಿಷ್ಠ ವೇಗ 50 ಕಿ.ಮೀ ಇದೆ. 960 ಲೀಟರ್ ಇಂಧನ ಸಂಗ್ರಹ ಸಾಮರ್ಥ್ಯ 485- 500 ಕಿ.ಮೀ ಚಲಿಸುವ ಕ್ಷಮತೆ ಇದೆ ಮುಖ್ಯ ಶ್ರಸ್ತ್ರಾಸ್ತ್ರ 105 ಮಿ.ಮೀ ದ್ವಿತೀಯ ಶಸ್ತ್ರಾಸ್ತ್ರ 02/ 7.62 ಮಿಮೀ 12.7 ಮಿ.ಮೀ ಸಂವಹನ 23/ 173 ಆರ್ ರಾತ್ರಿದೃಷ್ಟಿ ಗೋಚರ ಸಾಧನ ಲಭ್ಯತೆ ಹೊಂದಿದೆ. ಪರಮಾಣು ಜೈವಿಕ ರಾಸಾಯನಿಕಗಳಿಂದ ಮತ್ತು ಉಷ್ಣತೆ ಧೂಮಗಳಿಂದ ರಕ್ಷಣೆ ಮಾಡುವ ವಿಶೇಷತೆಯನ್ನು ಈ ಟ್ಯಾಂಕ್ ಹೊಂದಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.