ರಟ್ಟೀಹಳ್ಳಿ: ಇಲ್ಲಿಯ ಪಟ್ಟಣ ಪಂಚಾಯಿತಿ ಎದುರಿಗೆ ಒಂದೇ ಸಾರ್ವಜನಿಕ ಶೌಚಾಲಯವಿದ್ದು, ಅದು ಸಹ ಸ್ವಚ್ಛತೆ ಕೊರತೆಯಿಂದ ದುರ್ನಾತ ಬಿರುತ್ತಿದೆ.
ರಟ್ಟೀಹಳ್ಳಿ ಪಟ್ಟಣವು ಸುಮಾರು 20,000 ಜನಸಂಖ್ಯೆ ಹೊಂದಿದೆ. ಎಂಟು ವರ್ಷಗಳ ಹಿಂದೆಯಷ್ಟೇ ತಾಲ್ಲೂಕು ಕೇಂದ್ರವಾಗಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ.
19 ಗ್ರಾಮ ಪಂಚಾಯಿತಿ ವ್ಯಾಪ್ತಿಯ 63 ಹಳ‍್ಳಿಯ ಜನರು ಪ್ರತಿದಿನ, ವಿವಿಧ ಕೆಲಸಗಳಿಗೆ ರಟ್ಟೀಹಳ್ಳಿ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಇವರಿಗೆ ಶೌಚಾಲಯದ ಕೊರತೆ ಉಂಟಾಗಿದೆ.
ಪಟ್ಟಣ ಪಂಚಾಯಿತಿ ಎದುರಿನ ಶೌಚಾಲಯವನ್ನು ನಿತ್ಯವೂ ಸ್ವಚ್ಛಗೊಳಿಸುತ್ತಿಲ್ಲ. ಗಲೀಜು ಸ್ಥಳದಲ್ಲೇ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಪುರುಷರ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದೆ. ಮಹಿಳೆಯರಿಗಾಗಿ ಒಂದೇ ಶೌಚಾಲಯವಿದ್ದು, ಅದು ಸಹ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಯಾವಾಗಲೂ ಬೀಗ ಹಾಕಿರುತ್ತದೆ.
ತಾಲ್ಲೂಕು ಕೇಂದ್ರಕ್ಕೆ ಬರುವ ಸಾರ್ವಜನಿಕರು, ಮಹಿಳೆಯರು ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾಣೆಬೆನ್ನೂರು ರಸ್ತೆ, ಬಸ್‌ನಿಲ್ದಾಣದ ಹತ್ತಿರ ಶೌಚಾಲಯ ನಿರ್ಮಾಣಗೊಂಡಿದೆ. ಆದರೆ, ಪ್ರಾರಂಭಗೊಂಡಿಲ್ಲ. ಹೀಗಾಗಿ, ಜನರು ಎಲ್ಲೆಂದರಲ್ಲಿ ಮಲ–ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಪಟ್ಟಣ ಪಂಚಾಯಿತಿಯಿಂದ ಭಗತಸಿಂಗ್ ಸರ್ಕಲ್, ಶಿವಾಜಿ ಸರ್ಕಲ್, ಕೋಟೆ ಭಾಗ, ತುಮ್ಮಿನಕಟ್ಟಿ ರಸ್ತೆ, ಸಂತೆ ಸ್ಥಳ ಸೇರಿದಂತೆ ಹಲವೆಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
‘ರಟ್ಟೀಹಳ್ಳಿ ಪಟ್ಟಣದಲ್ಲಿ ಒಂದೇ ಸಾರ್ವಜನಿಕ ಶೌಚಾಲಯ ಇದೆ. ಅದೂ ಗಲೀಜುಗೊಂಡಿದೆ. ಪಟ್ಟಣದ ಆಯ್ದ ಭಾಗಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಅವಶ‍್ಯಕತೆಯಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನೂ ನಿರ್ಮಿಸಬೇಕು’ ಎಂದು ಪಟ್ಟಣದ ನಿವಾಸಿ ರಾಜು ವೇರ್ಣೇಕರ ತಿಳಿಸಿದರು.
- ‘ಜಾಗದ ಕೊರತೆ’ ‘ಸಾರ್ವಜನಿಕ ಶೌಚಾಲಯ ನಿರ್ಮಿಸಲು ಜಾಗದ ಕೊರತೆಯಿದೆ’ ಎಂದು ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಪ್ರತಿಕ್ರಿಯಿಸಿದರು. ‘ನಿರ್ಮಾಣ ಹಂತದಲ್ಲಿರುವ ರಾಣೆಬೆನ್ನೂರ ರಸ್ತೆ ಬಸ್‌ನಿಲ್ದಾಣ ಹತ್ತಿರದ ಶೌಚಾಲಯಗಳನ್ನು ಆದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು. ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.