
ರಟ್ಟೀಹಳ್ಳಿ: ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಕಾಮನ ದಹನೋತ್ಸವ ಆಚರಣೆಯು ಮಾ. 3ರಂದು ಜರುಗಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಆಚರಣೆ ವೀಕ್ಷಿಸಲು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ–ಹೊರ ರಾಜ್ಯದಿಂದಲೂ ಜನರು ಬರುತ್ತಾರೆ.
ಗ್ರಾಮದ ಮಧ್ಯಭಾಗದಲ್ಲಿ ಕಾಮದೇವನ ಶಿಲೆಯೊಂದು ದೊರೆತಿದ್ದು, ಅದು ಈ ಗ್ರಾಮಸ್ಥರ ಆರಾಧ್ಯ ದೈವವಾಗಿದೆ. ಇಂದಿಗೂ ಭಕ್ತಿ ಶ್ರದ್ಧೆಗಳಿಂದ ಭಕ್ತರು ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಯಾವುದೇ ಮನೆಯಲ್ಲಿ ಶುಭಕಾರ್ಯವಿದ್ದರೂ ಮೊದಲು ಇಲ್ಲಿನ ಕಾಮದೇವರ ಕಲ್ಲಿಗೆ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿ ಶುಭಕಾರ್ಯಗಳನ್ನು ನೆರವೇರಿಸುವ ವಾಡಿಕೆಯಿದೆ.
ಐತಿಹಾಸಿಕ ಹಿನ್ನೆಲೆ: ಇಂದಿನ ಮೇದೂರು, ಅಂದಿನ ಅರಣ್ಯ ಪ್ರದೇಶದ ಮೇಜೂರು ಎನಿಸಿಕೊಂಡಿತ್ತು. ಗ್ರಾಮದ ಗೌಡರ ಮನೆಯ ಆಕಳು ನಿತ್ಯ ಮೇಯಲು ಹೋಗುತ್ತಿತ್ತು. ಮನೆಯಲ್ಲಿ ಹಾಲು ಕೊಡುತ್ತಿರಲಿಲ್ಲ. ಇದರಿಂದ ಗೌಡರಿಗೆ ಸಂಶಯ ಬಂದು, ಆಕಳಿನ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಆಕಳು ಮೇಯಲು ಹೋದಾಗ, ಮಣ್ಣಿನ ಗುಡ್ಡೆಯಂತಿರುವ ಜಾಗದಲ್ಲಿ ಹಾಲು ಬಿಡುತ್ತಿತ್ತು. ಅದು ಗೊತ್ತಾಗುತ್ತಿದ್ದಂತೆ ಗೌಡ, ಮಣ್ಣು ಅಗೆಸಿದರು. ಅದೇ ಜಾಗದಲ್ಲಿ ಕಪ್ಪು ಶಿಲೆಯೊಂದು ದೊರೆಯಿತು. ಗ್ರಾಮದ ಪುರೋಹಿತರು ಬಂದು ನೋಡಿದಾಗ, ಶಿವನಿಂದ ಸಂಹಾರವಾದ ಕಾಮದೇವರ ಶಿಲೆಯೆಂದು ತಿಳಿಸಿದರು. ಅಂದಿನಿಂದ ಇಂದಿನವರೆಗೂ ಶಿಲೆಯನ್ನು ಕಾಮೇಶ‍್ವರ, ಹುಟ್ಟು ಕಾಮೇಶ‍್ವರ ಎಂಬ ಹೆಸರಿನಿಂದ ಜನರು ಪೂಜಿಸುತ್ತಿದ್ದಾರೆ.
ಬಯಲು ಆಲಯದಲ್ಲಿರುವ ದೇವಸ್ಥಾನದಲ್ಲಿ ಮಧ್ಯರಾತ್ರಿ ಮೂಲ ಶಿಲೆ ಪ್ರತಿಷ್ಠಾಪನೆ ಮಾಡುತ್ತಾರೆ. ಅಭಿಷೇಕ, ಪೂಜೆ ನಡೆಯುತ್ತದೆ. ನಂತರ, ಕಾಮದೇವನ ಮೆರವಣಿಗೆ ಗ್ರಾಮದಲ್ಲಿ ಪ್ರಾರಂಭಗೊಳ್ಳುತ್ತದೆ. ಬೆಳಗಿನ ಹುಬ್ಬಾ ನಕ್ಷತ್ರದವರೆಗೆ ಮೆರವಣಿಗೆ ಜರುಗುತ್ತದೆ. ನಂತರ ದೊಡ್ಡ ಗುಡ್ಡದಂತೆ ಹಾಕಿರುವ ಕುಳ್ಳು,ಕಟ್ಟಿಗೆ ಮೇಲೆ ಕಾಮದೇವನನ್ನು ಪ್ರತಿಷ್ಠಾಪಿಸಿ, ಕಾಮದಹನೋತ್ಸವ ಮಾಡಲಾಗುತ್ತದೆ. ಇದನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
‘ಮೇದೂರು ಗ್ರಾಮದ ಕಾಮದಹನೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಭಕ್ತರು ತಮ್ಮ ಹರಕೆ ಈಡೇರಿಸುವಂತೆ ದೇವರಿಗೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಮದಹನ ನಂತರ, ಹುಲುಸು ಒಡೆಯುವ ತನಕ ಗ್ರಾಮದಿಂದ ಯಾರು ಹೊರಗೆ ಹೋಗುವುದಿಲ್ಲ’ ಎಂದು ಕಾಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಪಾಲಾಕ್ಷಗೌಡ ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.