
ರಟ್ಟೀಹಳ್ಳಿ: ಪಟ್ಟಣದ ಹೊಳೆಸಾಲ ದುರ್ಗಾದೇವಿ ದೇವಸ್ಥಾನದ ರಸ್ತೆಯಲ್ಲಿ ಮುಕ್ತಿಧಾಮ ಅಭಿವೃದ‍್ಧಿಗೆ ಎಸ್.ಎಫ್.ಸಿ. ಯೋಜನೆಯಡಿ ₹ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕ ಯು.ಬಿ.ಬಣಕಾರ ತಿಳಿಸಿದರು.
ಅವರು ಮಂಗಳವಾರ ಹೊಳೆಸಾಲ ದುರ್ಗಾದೇವಿ ದೇವಸ್ಥಾನ ರಸ್ತೆಯಲ್ಲಿರುವ ಸ್ಮಶಾನ ಭೂಮಿ ಅಭಿವೃಧ‍್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ಪರ ಯೋಜನೆಗಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ತ್ವರಿತವಾಗಿ ಕಾರ್ಯಗತ ಮಾಡಬೇಕು. ಹೊಳೆಸಾಲು ದುರ್ಗಾದೇವಿ ದೇವಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಹೈಮಾಸ್ಕ್ ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.
ಮುಕ್ತಿಧಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಭಿನಂದನ ಬೋಗಾರ ಮಾತನಾಡಿ, ಇಲ್ಲಿರುವ ಸ್ಮಶಾನದಲ್ಲಿ 25ಕ್ಕೂ ಹೆಚ್ಚು ಸಮಾಜಗಳಿಂದ ಅಂತ್ಯಕ್ರಿಯೆಗಳು ನಡೆಯುತ್ತಿದ್ದು, ಯಾವುದೇ ಮೂಲಭೂತ ಸೌಕರ್ಯಗಳನ್ನು ಹೊಂದದೆ ದಶಕಗಳಿಂದ ಜನರು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಶಾಸಕರು ಅನುದಾನ ನೀಡಿದ್ದು, ಅಭಿವೃದ್ಧಿಗೆ ಚಾಲನೆ ದೊರೆತಂತಾಗಿದೆ. ಆದರೆ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದು, ಹೆಚ್ಚು ಅನುದಾನ ನೀಡಿ, ಸಂಪೂರ್ಣ ಅಭಿವೃದ್ಧಿ ಕಾಮಗಾರಿಗೆ ಸಾಕ್ಷಿಯಾಗಬೇಕು ಜೊತೆಗೆ ಎಲ್ಲ ಸಮಾಜದವರು ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಶಂಭಣ್ಣ ಗೂಳಪ್ಪನವರ, ರಾಜು ವೇರ್ಣಕರ ಸುಶೀಲ ನಾಡಗೇರ, ಶ್ರೀನಿವಾಸ ಭೈರೋಜಿಯವರ, ಕೆ.ವೈ ಬಾಜೀರಾಯರ, ಸುಭಾಷ ಹದಡೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.