
ರಟ್ಟೀಹಳ್ಳಿ: ಪಟ್ಟಣದಲ್ಲಿ ನಿರ್ಮಾಣಗೊಂಡ ಎರಡು ಸಾರ್ವಜನಿಕ ಶೌಚಾಲಯಗಳು ಉದ್ಘಾಟನೆಗೊಳ್ಳದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪಟ್ಟಣವು ತಾಲ್ಲೂಕು ಕೇಂದ್ರವಾಗಿರುವುದರಿಂದ ಸಾರ್ವಜನಿಕರಿಗೆ ಶೌಚಾಲಯ ಅಗತ್ಯವಾಗಿತ್ತು. ಇರುವುದೊಂದು ಪಟ್ಟಣ ಪಂಚಾಯ್ತಿ ಎದುರಿನ ಸಾರ್ವಜನಿಕ ಶೌಚಾಲಯ ಯಾವುದೇ ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿರುವುದರಿಂದ ಪಟ್ಟಣದಲ್ಲಿ ಶೌಚಾಲಯಗಳ ಅವಶ್ಯಕತೆ ಬಹಳಷ್ಟು ಪ್ರಮುಖ ಅಂಶವಾಗಿತ್ತು.
ಸ್ವಚ್ಛ ಭಾರತ ಮಿಷನ್ 2023-24ನೇ ಸಾಲಿನ ಅನುದಾನದಲ್ಲಿ ಸುಮಾರು ₹ 16 ಲಕ್ಷದ ಎರಡು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದರೂ ಅವುಗಳು ಇದುವರೆಗೂ ಉದ್ಘಾಟನೆಯಾಗದೆ ಸಾರ್ವಜನಿಕ ಬಳಕೆಗೆ ಸಿದ್ಧವಾಗಿರುವುದಿಲ್ಲ. ನೂತನವಾಗಿ ನಿರ್ಮಾಣಗೊಂಡ ಶೌಚಾಲಯಗಳ ಕಟ್ಟಡದ ಸುತ್ತಲೂ ಗಿಡಗಂಟೆಗಳು ಬೆಳೆದು ಕಟ್ಟಡವು ದುಃಸ್ಥಿತಿ ತಲುಪಿವೆ.
ಬಸ್ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣಗೊಂಡ ಶೌಚಾಲಯದ ಪಕ್ಕದಲ್ಲಿ ಬೃಹತ್ ಮರ ಇದ್ದು, ಅದರ ಬೇರುಗಳು ಕಟ್ಟಡವನ್ನು ಸಡಿಲುಗೊಳಿಸುತ್ತಿದ್ದು, ನೂತನವಾಗಿ ನಿರ್ಮಾಣಗೊಂಡ ಶೌಚಾಲಯ ಹಾಳುಕೊಂಪೆಯಾಗಿದೆ. ಅಲ್ಲದೇ ನಿರ್ಮಾಣಗೊಂಡ ಶೌಚಾಲಯದ ಎದುರಿಗೆ ಕುಡಿಯುವ ನೀರಿನ ಬೃಹತ್ ಓವರ್ ಹೆಡ್ ಟ್ಯಾಂಕ್ ಇದ್ದು, ಸಾರ್ವಜನಿಕರು ಸುಲಭವಾಗಿ ಹೋಗಿಬರುವಂತೆ ವ್ಯವಸ್ಥೆಯಿರುವುದಿಲ್ಲ.
ಇನ್ನೊಂದು ಸಾರ್ವಜನಿಕ ಶೌಚಾಲಯವು ರಾಣೇಬೆನ್ನೂರು ರಸ್ತೆಯ ತೋಟಗಾರಿಕೆ ಇಲಾಖೆಯ ಆವರಣದ ಹತ್ತಿರ ನಿರ್ಮಾಣ ಮಾಡಲಾಗಿದ್ದು, ಎರಡು ಶೌಚಾಲಯಗಳು ಸರಿ ಸುಮಾರು ಒಂದು ವರ್ಷ ಗತಿಸಿದರೂ ಉದ್ಘಾಟನೆಯಾಗದೇ ಕಟ್ಟಡ ದು:ಸ್ಥಿತಿ ತಲುಪಿವೆ. ಶೌಚಾಲಯ ವ್ಯವಸ್ಥೆ ಪಟ್ಟಣದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ. ಪ್ರತಿನಿತ್ಯ ಸಾವಿರಾರು ಜನರು ತಾಲ್ಲೂಕು ಕೇಂದ್ರಕ್ಕೆ ತಮ್ಮ ಕೆಲಸಕ್ಕೆ ಬರುತ್ತಿದ್ದು ಸಾರ್ವಜನಿಕರಿಗೆ ಶೌಚಾಲಯ ಬಳಕೆಯಾಗದೆ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವ ದುಃಸ್ಥಿತಿಯಿದೆ.
ಇನ್ನೂ ಮಹಿಳಯೆರ ಪರಿಸ್ಥಿತಿಯಂತೂ ಇನ್ನಷ್ಟು ಶೋಚನೀಯವಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಾದ ಭಗತಸಿಂಗ್ ಸರ್ಕಲ್, ಶಿವಾಜಿ ಸರ್ಕಲ್, ಇನ್ನೂ ಅನೇಕ ಪ್ರಮುಖ ವೃತ್ತಗಳಲ್ಲಿ ಶೌಚಾಲಯವಿಲ್ಲದೆ ಜನರು ಬಯಲಲ್ಲಿ ಶೌಚಕ್ಕೆ ಹೋಗುವ ಸಂದರ್ಭವಿದೆ. ಪಟ್ಟಣ ಪಂಚಾಯ್ತಿ ಬೆಲ್ಲದ ಪೇಟೆಯಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಮಾಡಿದ್ದರೂ ಸರಿಯಾದ ನಿರ್ವಹಣೆಯಿಲ್ಲದೆ ಬಾಗಿಲು ಮುರಿದ ಪರಿಸ್ಥಿತಿಯಲ್ಲಿದೆ.
ಈ ಹಿಂದೆ ಶಾಸಕ ಯು.ಬಿ.ಬಣಕಾರ 2024ರಲ್ಲಿ ಪ್ರವಾಸಿಮಂದಿರದ ಹತ್ತಿರ ಸಾರ್ವಜನಿಕ ಶೌಚಾಲಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಅಲ್ಲಿ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಳ ಬದಲಾವಣೆ ಮಾಡಲಾಗಿತ್ತು. ಸದ್ಯ ಸುಮಾರು ₹ 16 ಲಕ್ಷದಲ್ಲಿ ಎರಡು ಸಾರ್ವಜನಿಕ ಶೌಚಾಲಯಗಳು ಸರಿಯಾದ ಸ್ಥಳದಲ್ಲಿ ನಿರ್ಮಾಣ ಮಾಡಿರುವುದಿಲ್ಲ ಎನ್ನುವುದು ಸ್ಥಳೀಯರ ಕೂಗು, ಆದಾಗ್ಯೂ ಶೌಚಾಲಯ ಕೂಡಲೇ ಸುವ್ಯವಸ್ಥೆಯಿಂದ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ದಾರಿಮಾಡಿಕೊಡಬೇಕು ಎನ್ನುವುದು ಜನರ ವಾದ.
‘ಶೌಚಾಲಯಕ್ಕೆ ಸೆಫ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಹಣದ ಕೊರತೆಯಿತ್ತು. ಹೀಗಾಗಿ ಅವುಗಳನ್ನು ಉದ್ಘಾಟನೆ ಮಾಡಿರುವುದಿಲ್ಲ. ಶೀಘ್ರದಲ್ಲಿಯೇ ಅನುದಾನ ತಂದು ಅವುಗಳ ಬಳಕೆಗೆ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ’ ಪಟ್ಟಣ ಪಂಚಾಯ್ತಿ ಮುಖ‍್ಯಾಧಿಕಾರಿ ಸಂತೋಷ.
2023-24ನೇ ಸಾಲಿನಲ್ಲಿ ₹16 ಲಕ್ಷಗಳಲ್ಲಿ ಎರಡು ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿದ್ದು ಕಟ್ಟಡಕ್ಕೆ ಟ್ಯಾಂಕ್ ಅಳವಡಿಕೆ ಒಂದು ಬಾಕಿಯಿದೆಸಂತೋಷ ಚಂದ್ರಿಕೆರೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.