ADVERTISEMENT

ಹಾವೇರಿ: ತುರ್ತು ಚಿಕಿತ್ಸೆಗೆ ಕಾದಿರುವ ‘ರೆಡ್‌ಕ್ರಾಸ್’!

4 ವರ್ಷಗಳಿಂದ ಸಾಮಾನ್ಯ ಸಭೆಯೇ ನಡೆದಿಲ್ಲ | ಅಕ್ರಮ ಚಟುವಟಿಕೆಗಳ ತಾಣವಾದ ಕಟ್ಟಡ

ಸಿದ್ದು ಆರ್.ಜಿ.ಹಳ್ಳಿ
Published 23 ಜುಲೈ 2021, 5:43 IST
Last Updated 23 ಜುಲೈ 2021, 5:43 IST
ಹಾವೇರಿ ನಗರದ ಹೊರವಲಯದಲ್ಲಿರುವ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕಟ್ಟಡ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ನಗರದ ಹೊರವಲಯದಲ್ಲಿರುವ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕಟ್ಟಡ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಸೇವೆ ನೀಡಿ ಜನರ ಜೀವ ಉಳಿಸುವ ‘ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ’ಯ ಜಿಲ್ಲಾ ಶಾಖೆಯು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗೆ ಕಾದಿದೆ.

ನಗರದ ಕೇಂದ್ರ ಭಾಗದಿಂದ 5 ಕಿ.ಮೀ. ದೂರದ ಹೊರವಲಯದಲ್ಲಿ, ಆರ್‌ಟಿಒ ಕಚೇರಿ ಸಮೀಪ ನಿರ್ಮಿಸಿರುವ ‘ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ’ಯ ಜಿಲ್ಲಾ ಶಾಖೆಯ ಕಟ್ಟಡ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕಟ್ಟಡ ನಿರ್ಮಾಣವಾಗಿ ಮೂರು ವರ್ಷಗಳು ಕಳೆದರೂ ಸಂಪರ್ಕ ರಸ್ತೆ, ವಿದ್ಯುತ್‌, ಕುಡಿಯುವ ನೀರು, ಕಾಂ‍ಪೌಂಡ್‌ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೆ ಪಾಳು ಬಿದ್ದಿದೆ.

ಹಾವೇರಿ ನಗರಸಭೆ ವತಿಯಿಂದ13ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತ ಕುಡುಕರು ಎಸೆದ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೆಟ್‌ಗಳು, ಕಸದ ತ್ಯಾಜ್ಯ... ರೆಡ್‌ಕ್ರಾಸ್‌ ಕಟ್ಟಡದ ಅವ್ಯವಸ್ಥೆಗೆ ಕನ್ನಡಿ ಹಿಡಿದಿವೆ.

ADVERTISEMENT

ಆಡಳಿತ ಮಂಡಳಿ ರಚನೆಯಾಗಿಲ್ಲ:

ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ಈ ಜಿಲ್ಲಾ ಶಾಖೆಯಲ್ಲಿ 600ಕ್ಕೂ ಹೆಚ್ಚು ಆಜೀವ ಸದಸ್ಯರು ಇದ್ದಾರೆ. ಪ್ರತಿ 3 ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯ ಸದಸ್ಯರನ್ನು ಚುನಾಯಿಸಬೇಕು. ಹಿಂದಿನ ಆಡಳಿತ ಸದಸ್ಯರ ಅವಧಿ ಮುಗಿದು ಮೂರು ವರ್ಷಗಳಾಗಿದ್ದರೂ, ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಆಡಳಿತ ಮಂಡಳಿಯನ್ನು ರಚನೆ ಮಾಡಿಲ್ಲ. ಮೂರ್ನಾಲ್ಕು ವರ್ಷಗಳಿಂದ ಸರ್ವ ಸದಸ್ಯರ ‘ವಾರ್ಷಿಕ ಸಾಮಾನ್ಯ ಸಭೆ’ಯನ್ನೇ ಕರೆದಿಲ್ಲ ಎಂಬುದು ಸದಸ್ಯರ ದೂರು.

‘ಜಿಲ್ಲೆಯಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ ಧಾನ್ಯ ಮತ್ತು ಬಟ್ಟೆಗಳ ನೆರವು ಮುಂತಾದ ಸೇವಾ ಕಾರ್ಯಗಳ ಮೂಲಕ ಪ್ರಶಸ್ತಿಗೂ ಭಾಜನವಾಗಿದ್ದ ಶಾಖೆಯು, ಈಗ ಚುನಾಯಿತ ಸದಸ್ಯರ ಆಡಳಿತ ಮಂಡಳಿಯಿಲ್ಲದೆ ನಿಷ್ಕ್ರಿಯವಾಗಿದೆ. ಶಾಖೆಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಸದಸ್ಯರಿಗೇ ಮಾಹಿತಿಯಿಲ್ಲ. ಈ ಬಗ್ಗೆ ಮೂರ್ನಾಲ್ಕು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ’ ಸದಸ್ಯರಾದ ಪ್ರಭು ಹಿಟ್ನಳ್ಳಿ ಮತ್ತು ರವಿ ಮೆಣಸಿನಕಾಯಿ.

ಶಾಖೆಯಲ್ಲಿ ಅವ್ಯವಹಾರ!

‘ಐದಾರು ವರ್ಷಗಳ ಹಿಂದೆ ರೆಡ್‌ಕ್ರಾಸ್‌ ಶಾಖೆಯಲ್ಲಿ ಸುಮಾರು ₹5 ಲಕ್ಷ ಅವ್ಯವಹಾರವಾಗಿತ್ತು. ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆಯೇ ಒಳಜಗಳ ಶುರುವಾಗಿತ್ತು. ಹೀಗಾಗಿ, ಹೊಸ ಆಡಳಿತ ಮಂಡಳಿಯನ್ನು ರಚನೆ ಮಾಡಲು ಅಂದಿನ ಜಿಲ್ಲಾಧಿಕಾರಿ ಆಸಕ್ತಿ ತೋರಲಿಲ್ಲ. ಹೀಗಾಗಿ ಅಧಿಕಾರಿಗಳ ನೇತೃತ್ವದಲ್ಲೇ ಸಂಸ್ಥೆಯನ್ನು ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸದಸ್ಯರೊಬ್ಬರು.

‘ಸರ್ಕಾರದಿಂದ ಬಂದ ₹5 ಲಕ್ಷ ಅನುದಾನದಲ್ಲಿಕೋವಿಡ್‌ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್‌ ಕಾನ್ಸಂಟ್ರೇಟರ್‌, ಪಲ್ಸ್‌ ಆಕ್ಸಿಮೀಟರ್‌, ಮಾಸ್ಕ್‌ ಇನ್ನಿತರ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಸಾಮಾನ್ಯ ಸಭೆ ಕರೆಯಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಗಮನಕ್ಕೆ ತಂದಿದ್ದೇವೆ’ ಎಂದು ಜಿಲ್ಲಾ ಶಾಖೆಯ ಮಾಜಿ ಚೇರ್ಮನ್‌ ಸಂಜೀವಕುಮಾರ ನೀರಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

* ರೆಡ್‌ಕ್ರಾಸ್‌ ಸದಸ್ಯರ ‘ವಾರ್ಷಿಕ ಸಾಮಾನ್ಯ ಸಭೆ’ ಕರೆದು, ಚುನಾಯಿತ ಸದಸ್ಯರ ಆಡಳಿತ ಮಂಡಳಿಯನ್ನು ಕೂಡಲೇ ರಚನೆ ಮಾಡಬೇಕು.

– ಪ್ರಭು ಹಿಟ್ನಳ್ಳಿ, ರೆಡ್‌ಕ್ರಾಸ್‌ ಜಿಲ್ಲಾ ಶಾಖೆ ಸದಸ್ಯ

* ನಾಲ್ಕೈದು ವರ್ಷಗಳಿಂದ ವಾರ್ಷಿಕ ವರದಿ ಒಪ್ಪಿಸಿಲ್ಲ, ಅನುದಾನದ ಬಗ್ಗೆ ಮಾಹಿತಿ ನೀಡಿಲ್ಲ. ಶಾಖೆಯ ಚಟುವಟಿಕೆ ಬಗ್ಗೆ ಸದಸ್ಯರಿಗೇ ಮಾಹಿತಿಯಿಲ್ಲ

– ರವಿ ಮೆಣಸಿನಕಾಯಿ, ರೆಡ್‌ಕ್ರಾಸ್‌ ಜಿಲ್ಲಾ ಶಾಖೆ ಸದಸ್ಯ

* ಸಾಮಾನ್ಯ ಸಭೆ ಕರೆಯಲು ಜಿಲ್ಲಾಧಿಕಾರಿಗಳ ಅನುಮತಿ ಕೇಳಿದ್ದೇವೆ. ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕೆಇಬಿಗೆ ಅರ್ಜಿ ಹಾಕಿದ್ದೇವೆ.

– ಎಂ.ಸಿ.ಕೊಳ್ಳಿ, ಗೌರವ ಕಾರ್ಯದರ್ಶಿ, ರೆಡ್‌ಕ್ರಾಸ್‌ ಜಿಲ್ಲಾ ಶಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.