
ಹಾವೇರಿ: ‘ಹುಕ್ಕೇರಿಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಸಾಗರೋಪಾದಿ ಭಕ್ತರನ್ನು ನೋಡಿದರೆ, ಇಡೀ ಕರ್ನಾಟಕದಲ್ಲಿಯೇ ಇಂಥ ಕಾರ್ಯಕ್ರಮವನ್ನು ನಾವು ಎಂದಿಗೂ ನೋಡಿಲ್ಲ. ಟಿ.ವಿ. ಹಾಗೂ ಮೊಬೈಲ್ ಯುಗದಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ಇದೊಂದು ದಾಖಲೆ ಬರೆದ ಕಾರ್ಯಕ್ರಮ’ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ಹಾಗೂ ಮಹಿಳಾ ಗೋಷ್ಠಿ’ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಂದಿನ ಆಧುನಿಕ ಯುಗದಲ್ಲಿ ಮನೆಯಲ್ಲಿರುವ ಟಿ.ವಿ ಹಾಗೂ ಮೊಬೈಲ್ ಬಿಟ್ಟು ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಬರುವುದೇ ಕಡಿಮೆಯಾಗಿದೆ. ಬಂದರೂ ಶಾಂತವಾಗಿ ಕುಳಿತು ಸ್ವಾಮೀಜಿಗಳ ಒಳ್ಳೆಯ ಮಾತು ಕೇಳುವುದು ದುಸ್ತರವಾಗಿದೆ. ಆದರೆ, ಹಾವೇರಿಯ ಭಕ್ತರು ಎಲ್ಲ ದಾಖಲೆ ಮುರಿದಿದ್ದಾರೆ. ಹಾವೇರಿಯ ಅರ್ಧದಷ್ಟು ಮಂದಿ ಮೈದಾನದಲ್ಲಿದ್ದಾರೆ’ ಎಂದರು.
ಮಹಿಳೆಯರು ಶಿಕ್ಷಣವಂತರಾದರಷ್ಟೇ ವಿಕಸಿತ ಭಾರತ: ‘ಮಹಿಳೆಯರು ಎಲ್ಲ ರಂಗದಲ್ಲೂ ಪ್ರತಿಭೆ ಮೂಲಕ ಸಾಧನೆ ಮಾಡುತ್ತಿದ್ದಾರೆ. ಮಠದಿಂದ ಮಹಿಳಾ ಗೋಷ್ಠಿ ಹಮ್ಮಿಕೊಂಡಿರುವುದು ಶ್ಲಾಘನೀಯ. 2047ಕ್ಕೆ ಭಾರತ ವಿಕಸಿತವಾಗುವುದಾಗಿ ಹೇಳುತ್ತಿದ್ದಾರೆ. ಆದರೆ, ದೇಶದಲ್ಲಿರುವ ಎಲ್ಲ ಮಹಿಳೆಯರು ಶಿಕ್ಷಣವಂತರಾದರಷ್ಟೇ ವಿಕಸಿತ ಭಾರತ ಸಾಧ್ಯ. ಮಹಿಳೆಯರಿಗೆ ಶಿಕ್ಷಣದ ಅಗತ್ಯವಿದೆ’ ಎಂದರು.
‘ಮಹಿಳೆಯು ಮಮತೆಯ ಮಡಿಲಾಗಿ, ಮಾನವೀಯತೆ ಶಕ್ತಿಯಾಗಿ, ಸಮಾಜದ ಕೈಗನ್ನಡಿಯಾಗಿ, ಆಚಾರ–ವಿಚಾರಗಳ ಆದರ್ಶ ನಾಡಿಯಾಗಿ, ಅಂದದ ಅರಗಿಣಿಯಾಗಿ, ಮಕ್ಕಳಿಗೆ ತಾಯಿಯಾಗಿ, ಮನೆಗೆ ಕೆಲಸದವಳಾಗಿ ಎಲ್ಲ ಅಗತ್ಯವನ್ನು ಪೂರೈಸುತ್ತಿದ್ದಾರೆ. ಎಲ್ಲಿ ಮಹಿಳೆಯನ್ನು ಗೌರವಿಸುತ್ತಾರೆಯೋ ಅಲ್ಲಿಯೇ ದೇವರು–ದೇವತೆ ನೆಲೆಸಿರುತ್ತಾರೆ’ ಎಂದು ತಿಳಿಸಿದರು.
‘ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ, ಕೌಟುಂಬಿಕ– ಲೈಂಗಿಕ ದೌರ್ಜನ್ಯ, ಬಾಲಗರ್ಭಿಣಿ ಸೇರಿದಂತೆ ಮಹಿಳೆಯರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. 26 ನಿಮಿಷಕ್ಕೆ ಒಬ್ಬ ಮಹಿಳೆಗೆ ಕಿರುಕುಳ ನೀಡಲಾಗುತ್ತಿದೆ. 34 ನಿಮಿಷಕ್ಕೊಬ್ಬ ಮಹಿಳೆ ಮೇಲೆ ಅತ್ಯಾಚಾರವಾಗುತ್ತಿದೆ. 43 ನಿಮಿಷಕ್ಕೊಬ್ಬ ಮಹಿಳೆ ಅಪಹರಣ, 93 ನಿಮಿಷಕ್ಕೆ ಒಬ್ಬ ಮಹಿಳೆಯನ್ನು ವರದಕ್ಷಿಣೆಗಾಗಿ ಕೊಲ್ಲಲಾಗುತ್ತಿದೆ. ಇದಕ್ಕೆಲ್ಲ ಸಮಾಜದಲ್ಲಿರುವ ತಪ್ಪು ನಂಬಿಕೆಗಳು, ಸಂಪ್ರದಾಯಗಳು, ಮೂಲ ಸೌಕರ್ಯಗಳ ಕೊರತೆ, ಆರ್ಥಿಕ ಸಮಸ್ಯೆಯೇ ಕಾರಣ’ ಎಂದರು.
ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಶಿರಸಿಯ ಅಟವಿ ಶಿವಲಿಂಗ ಸ್ವಾಮೀಜಿ, ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಸವರಾಜ ಶಿವಣ್ಣನವರ, ಮುಖಂಡರಾದ ಶಿವರಾಜ ಸಜ್ಜನವರ, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ಹಾಗೂ ಇತರರು ಇದ್ದರು.
ಹನುಮಂತನ ಹಾಡಿಗೆ ಹೆಜ್ಜೆ ಹಾಕಿದ ಜನ: ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತ ಹನುಮಂತ, ಸರಿಗಮಪ ಖ್ಯಾತಿಯ ಮೆಹಬೂಬಸಾಬ್, ದ್ಯಾಮೇಶ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ‘ಸಾವಿರದ ಶರಣು ಗಾಯಯೋಗಿ ಪ್ರಭುವೇ’, ‘ಕೇಳೋ ಜಾಣ ಶಿವ ಧ್ಯಾನ ಮಾಡಣ್ಣ’, ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದರು.
ರಜತ ಮಹೋತ್ಸವ
ಇಂದು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 26ರಂದು ಸಂಜೆ 6.30 ಗಂಟೆಗೆ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವ ಹಾಗೂ ಪ್ರಸಾದ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ರಜತ ಮಹೋತ್ಸವ ಸಮಾರಂಭವಿದೆ. ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ತುಮಕೂರಿನ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವರಾದ ಎಚ್.ಕೆ. ಪಾಟೀಲ ಈಶ್ವರ ಖಂಡ್ರೆ ನಟ ದೊಡ್ಡಣ್ಣ ಭಾಗವಹಿಸಲಿದ್ದಾರೆ. ಸರಿಗಮಪ ಶಿವಾನಿ ಶಿವದಾಸಸ್ವಾಮಿ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.