ADVERTISEMENT

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 14:46 IST
Last Updated 25 ಸೆಪ್ಟೆಂಬರ್ 2021, 14:46 IST
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹಾವೇರಿ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಶನಿವಾರ ಧರಣಿ ನಡೆಯಿತು
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹಾವೇರಿ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಶನಿವಾರ ಧರಣಿ ನಡೆಯಿತು   

ಹಾವೇರಿ: ಶತ, ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಶನಿವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಧರಣಿ ನಡೆಯಿತು.

ಹಾವೇರಿ ಆದಿಜಾಂಬವ ಮಾದಿಗ ಸಂಘದ ಸಲಹಾ ಸಮಿತಿಯ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಲಗೆ ಬಾರಿಸಿ, ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಚಂದ್ರಣ್ಣ ಹರಿಜನ, ಹನುಮಂತಪ್ಪ ಕಬ್ಬಾರ, ಪರಮೇಶ್ವರಪ್ಪ ಮೇಗಳಮನಿ ಮುಂತಾದವರು ಮಾತನಾಡಿ, ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಎನ್ನುವುದು ಮರೀಚಿಕೆಯಾಗಿದೆ. ಮೂಲ ಅಸ್ಪ್ರಶ್ಯರಾಗಿರುವ ನಮ್ಮ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ಸ್ಪರ್ಶ ಜಾತಿಗಳು ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಕಬಳಿಸುತ್ತಾ ಬಂದಿವೆ ಎಂದು ದೂರಿದರು.

ADVERTISEMENT

ಒಳಮೀಸಲಾತಿ ವರ್ಗಿಕರಣವನ್ನು ಚರ್ಚಿಸಿ ಅನುಮೋದಿಸಿ ಕೇಂದ್ರ ಸರ್ಕಾರಕ್ಕೆ ಅಂತಿಮ ಅನುಮೋದನೆಗೆ ಕಳಿಸಬೇಕು. ನಮ್ಮ ಸಮುದಾಯದ ಪ್ರಬಲ ಬೇಡಿಕೆಯಾಗಿರುವ ಒಳಮೀಸಲು ವರ್ಗಿಕರಣವನ್ನು ಜಾರಿಗೊಳಿಸಲು ಸಂಸದರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ ಅವರು, ಮಾದಿಗ ಸಮಾಜ ಬೇಡಿಕೆ ನ್ಯಾಯಸಮ್ಮತವಾಗಿದ್ದು, ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ. ನೀವು ಯಾರ ಹಕ್ಕನ್ನು ಕೇಳುತ್ತಿಲ್ಲ. ನಿಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿರುವಿರಿ. ನಿಮ್ಮ ಬೇಡಿಕೆಗಳ ಈಡೇರಿಕೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚಿಸುವೆ. ನಿಮ್ಮ ಬೇಡಿಕೆಗಳಿಗೆ ನನ್ನ ಸಹಮತ ಇದೆ ಎಂದರು.

ನಂತರ ಪ್ರತಿಭಟನಾಕಾರರು ಜಿಲ್ಲಾ ಕಾಂಗ್ರೆಸ್ -ಬಿಜೆಪಿ-ಜೆಡಿಎಸ್ ಕಾರ್ಯಾಲಯಗಳಿಗೆ ಮೆರವಣಿಗೆಯೊಂದಿಗೆ ತೆರಳಿ ಕಾರ್ಯಾಲಯದ ಪ್ರಮುಖರಿಗೆ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮನವಿ ಅರ್ಪಿಸಿದರು.

ಮಂಜು ದಡ್ಡೂರ, ನಾಗರಾಜ್ ಮಾಳಮ್ಮನವರ, ನಿಂಗಪ್ಪ ಕಡೂರ, ಹನುಮಂತಪ್ಪ ಗಾಜಿ, ಮೈಲಪ್ಪ ದಾಸಪ್ಪನವರ, ಮೈಲೆಪ್ಪ ಗೋಣಿಬಸಮ್ಮನವರ, ಗುಡ್ಡಪ್ಪ ಹಂಚಿನಮನಿ, ರಾಜೇಶ್ ಮೇಗಳಮನಿ, ಮಾರುತಿ ಸೊಟ್ಟಪ್ಪನವರ, ಸುರೇಶ್ ಹಳ್ಳಳ್ಳಿ, ಅಜ್ಜಪ್ಪ ಮಲ್ಲಣ್ಣನವರ, ಪ್ರಕಾಶ ಬಣಕಾರ, ಫಕ್ಕಿರೇಶ ಬಣಕಾರ, ಪಾರ್ವತಿ ಗೋಣೆಮ್ಮನವರ, ಜಗದೀಶ ಕರಬಸಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.