ADVERTISEMENT

ಲಾಕ್‌ಡೌನ್‌ ಅವಧಿಯಲ್ಲೂ ಆದಾಯ ದ್ವಿಗುಣ

ಹಾವೇರಿ ಜಿಲ್ಲೆಯ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಯಲ್ಲಿ 1.67 ಲಕ್ಷ ಸಸಿಗಳು ಲಭ್ಯ

ಸಿದ್ದು ಆರ್.ಜಿ.ಹಳ್ಳಿ
Published 13 ಜೂನ್ 2021, 3:54 IST
Last Updated 13 ಜೂನ್ 2021, 3:54 IST
ಶಿಗ್ಗಾವಿ ತಾಲ್ಲೂಕಿನ ಯತ್ತಿನಹಳ್ಳಿಯ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆಸಿರುವ ತೆಂಗಿನ ಸಸಿಗಳು
ಶಿಗ್ಗಾವಿ ತಾಲ್ಲೂಕಿನ ಯತ್ತಿನಹಳ್ಳಿಯ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆಸಿರುವ ತೆಂಗಿನ ಸಸಿಗಳು   

ಹಾವೇರಿ: ‘ಕೊರೊನಾ ಲಾಕ್‌ಡೌನ್‌’ ನಡುವೆಯೂ ಜಿಲ್ಲೆಯ ತೋಟಗಾರಿಕೆ ಇಲಾಖೆಯು 2020–21ನೇ ಸಾಲಿನಲ್ಲಿ ಅತಿ ಹೆಚ್ಚು ನರ್ಸರಿ ಕಸಿ/ಸಸಿಗಳನ್ನು ಮಾರಾಟ ಮಾಡಿ ಬರೋಬ್ಬರಿ ₹18 ಲಕ್ಷ ಆದಾಯ ಗಳಿಸಿದೆ. ಫಸಲಿನ ಆದಾಯವೂ ಸೇರಿ ಒಟ್ಟು ₹22 ಲಕ್ಷ ಆದಾಯ ಸಿಕ್ಕಿದೆ.

2017–18ನೇ ಸಾಲಿನಲ್ಲಿ ₹3 ಲಕ್ಷವಿದ್ದ ಆದಾಯ, 2019–20ನೇ ಸಾಲಿನಲ್ಲಿ ₹9 ಲಕ್ಷಕ್ಕೆ ಏರಿಕೆಯಾಗಿತ್ತು. ಈ ಬಾರಿ ₹18 ಲಕ್ಷಕ್ಕೆ ಆದಾಯ ದ್ವಿಗುಣಗೊಂಡಿದೆ.ಇದಕ್ಕೆ ಕಾರಣ ವರ್ಷದಿಂದ ವರ್ಷಕ್ಕೆ ತೋಟಗಾರಿಕಾ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿರುವುದು. ಕಳೆದ ವರ್ಷ 30 ಸಾವಿರ ತೆಂಗಿನ ಸಸಿಗಳ ಮಾರಾಟವೊಂದರಿಂದಲೇ ಅಂದಾಜು ₹16 ಲಕ್ಷ ಆದಾಯ ಬಂದಿತ್ತು.

ವರ್ಷದಿಂದ ವರ್ಷಕ್ಕೆ ‘ಅರಸೀಕೆರೆ ಟಾಲ್‌’ ಮತ್ತು ‘ಹೈಬ್ರಿಡ್‌ ತಳಿ’ಯ ತೆಂಗಿನ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. 2021–22ನೇ ಸಾಲಿಗೆ 40 ಸಾವಿರ ತೆಂಗಿನ ಸಸಿ (ಅರಸೀಕೆರೆ ಟಾಲ್‌)ಗಳನ್ನು ಬೆಳೆಸಲಾಗಿದ್ದು, ಈಗಾಗಲೇ 10 ಸಾವಿರ ತೆಂಗಿನ ಸಸಿಗಳನ್ನು ರೈತರು ಖರೀದಿಸಿದ್ದಾರೆ. ಜಿಲ್ಲೆಯ ವಿವಿಧ ತಾಲ್ಲೂಕುಗಳು ಮಾತ್ರವಲ್ಲದೆ, ಗದಗ, ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ತೆಂಗಿನ ಸಸಿಗಳಿಗೆ ಭಾರಿ ಬೇಡಿಕೆ ಬರುತ್ತಿದೆ.

ADVERTISEMENT

ತರಹೇವಾರಿ ಸಸಿಗಳು: ಶಿಗ್ಗಾವಿ ತಾಲ್ಲೂಕಿನ ಯತ್ತಿನಹಳ್ಳಿ, ಹಾವೇರಿ ತಾಲ್ಲೂಕಿನ ಕರ್ಜಗಿ, ಹಾವೇರಿ ನಗರದ ಕಚೇರಿ ನರ್ಸರಿ, ಹಿರೇಕೆರೂರು ತಾಲ್ಲೂಕಿನ ಹಂಸಭಾವಿ, ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ, ಬ್ಯಾಡಗಿ ಕಚೇರಿ ನರ್ಸರಿ ಹಾಗೂ ರಟ್ಟೀಹಳ್ಳಿ, ಸವಣೂರು, ಹಾನಗಲ್‌ ತೋಟಗಾರಿಕಾ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ತರಹೇವಾರಿ ತೋಟಗಾರಿಕಾ ಸಸಿಗಳನ್ನು ಬೆಳೆಸಲಾಗಿದೆ.

ಮೇ ಅಂತ್ಯಕ್ಕೆ, ತೋಟಗಾರಿಕಾ ಇಲಾಖೆ ಬಳಿ ಮಾವು–28,513, ಸೀಬೆ–696, ನಿಂಬೆ–22,057, ಗೋಡಂಬಿ–14,387, ನುಗ್ಗೆ–12,582, ಕರಿಬೇವು–35,085 ಸಸಿಗಳು ಮಾರಾಟಕ್ಕೆ ಲಭ್ಯವಿವೆ. ಇದರ ಜತೆಗೆ ಆಲಂಕಾರಿಕ ಸಸಿಗಳಾದ ಡ್ರೇಸಿನಾ–2,632, ದುರಂತ್‌–3,625, ಕ್ರೋಟಾನ್‌–1,841, ಅರೇಕಾ ಪಾಮ್‌–683, ಅಕೆಲಿಫಾ–2,712, ದಾಸವಾಳ–2,655 ಸಸಿಗಳನ್ನು ಆರೈಕೆ ಮಾಡಲಾಗಿದೆ.

ವೈವಿಧ್ಯಮಯ ದರ: ತೆಂಗು–₹70, ಮಾವು (ಆಪೋಸ್‌)–₹36, ಕರಿಬೇವು (ಸುಹಾಸಿನಿ)–₹12, ನಿಂಬೆ–₹11, ಗೋಡಂಬಿ–₹32 ದರದಲ್ಲಿ ಮಾರಾಟವಾಗುತ್ತಿವೆ.ಆಲಂಕಾರಿಕ ಸಸಿಗಳಾದ ಅಕೇಲಿಫಾ–₹25, ಕ್ರೋಟಾನ–₹25, ಡ್ರೇಸಿನಾ–₹25, ದುರಂತಾ–₹10, ದಾಸವಾಳ–₹25 ದರದಲ್ಲಿ ಲಭ್ಯ ಇವೆ.

25 ಸಾವಿರ ಅಡಿಕೆ ಸಸಿ ಆರೈಕೆ: ‘ಜಿಲ್ಲೆಯಲ್ಲಿ ರಾಣೆಬೆನ್ನೂರು, ಹಿರೇಕೆರೂರು ಮತ್ತು ಹಾನಗಲ್‌ ತಾಲ್ಲೂಕುಗಳಲ್ಲಿ ತೆಂಗು ಬೆಳೆಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ತೆಂಗು ಬೆಳೆ ಕ್ಷೇತ್ರ ವಿಸ್ತರಣೆಯಾಗುತ್ತಿದೆ. ಇಲಾಖೆ ವತಿಯಿಂದ ಮೊದಲ ಬಾರಿಗೆ ಹಾನಗಲ್‌ ತೋಟಗಾರಿಕೆ ಕ್ಷೇತ್ರದಲ್ಲಿ 25 ಸಾವಿರ ಅಡಿಕೆ ಸಸಿಗಳನ್ನು ಆರೈಕೆ ಮಾಡುತ್ತಿದ್ದೇವೆ. 2022–23ನೇ ಸಾಲಿಗೆ ಖರೀದಿಗೆ ಲಭ್ಯವಾಗುತ್ತವೆ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನೂರ್‌ ಅಹಮದ್‌ ಹಲಗೇರಿ ತಿಳಿಸಿದರು.

ಸಸಿಗಳ ಮಾಹಿತಿಗೆ ಯತ್ತಿನಹಳ್ಳಿ– 99168 25578, ಸವಣೂರ–96865 38112, ಕರ್ಜಗಿ–97414 41502, ಹಾವೇರಿ–96865 38112, ಚೌಡಯ್ಯದಾನಪುರ–95359 10697, ಬ್ಯಾಡಗಿ–95912 77371, ರಟ್ಟೀಹಳ್ಳಿ– 79756 59810, ಹಂಸಭಾವಿ–94499 86945, ಹಾನಗಲ್‌–78290 91299 ಸಂಪರ್ಕಿಸಿ.

ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ಬಂದ ಆದಾಯದ ವಿವರ (ಲಕ್ಷಗಳಲ್ಲಿ)

ಆದಾಯದ ಮೂಲ;2017–18;2018–19;2019–20;2020–21

ಗಿಡಗಳ ಮಾರಾಟ;₹3.08;₹3.50;₹8.85;₹18.31

ಫಸಲಿನ ಆದಾಯ;₹2.08;₹3.97;₹3.44;₹4.12

ಒಟ್ಟು;₹5.17;₹7.48;₹12.30;₹22.43

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.