ಹಾನಗಲ್: ತಾಲ್ಲೂಕು ಕೇಂದ್ರ ಸಂಪರ್ಕದ ಮುಖ್ಯ ರಸ್ತೆಗಳು ಮತ್ತು ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಿಸಿದ ಇಲಾಖೆಗಳು ನಿರ್ವಹಣೆ ಜವಾಬ್ದಾರಿಯನ್ನು ಮರೆತಿವೆ ಎಂದು ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ತಾಲ್ಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗಳು ನಡೆದವು.
ಸಭೆಯ ನೇತೃತ್ವ ವಹಿಸಿದ್ದ ಶಾಸಕ ಶ್ರೀನಿವಾಸ ಮಾನೆ ಈ ಬಗ್ಗೆ ಮಾತನಾಡಿ, ರಸ್ತೆಯ ತೆಗ್ಗು ಗುಂಡಿ ಮುಚ್ಚುವ ತಾತ್ಕಾಲಿಕ ಸುಧಾರಣೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲದ ಕಾರಣಕ್ಕಾಗಿ ಮತ್ತೆ ಗುಂಡಿಗಳು ಬಾಯ್ತೆರೆಯುತ್ತವೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪಿಡಬ್ಲುಡಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾನಗಲ್–ಬಂಕಾಪೂರ ರಸ್ತೆ ಹಾಳಾಗಿದೆ. ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆ ಹಲವಾರು ಅವಾಂತರಗಳಿಂದ ಕೂಡಿದೆ. ಪಾದಚಾರಿ ಮಾರ್ಗವೂ ಸುರಕ್ಷಿತವಾಗಿಲ್ಲ ಎಂದು ಗ್ಯಾರಂಟಿ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಆಕ್ಷೇಪಿಸಿದರು.
ಜನರ ಕೆಲಸಕ್ಕೆಂದು ಸರ್ಕಾರಿ ಕಚೇರಿಗಳಿಗೆ ಬರುವ ಜನಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರನ್ನು ಗಂಟೆಗಟ್ಟಲೇ ಕಾಯಿಸುತ್ತಾರೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ರಾಜು ಜೋಗಪ್ಪನವರ, ಹಹ್ಮದ್‌ಹನೀಫ್ ಬಂಕಾಪೂರ ಅಸಾಮಾಧಾನ ವ್ಯಕ್ತಡಿಸಿದರು.
ಧರ್ಮಾ ಕಾಲುವೆ ವ್ಯಾಪ್ತಿಯ ಕೆರೆಗಳು ಮತ್ತು ವರದಾ ನದಿಯ ವಿವಿಧ ಏತ ನೀರಾವರಿ ಇಲಾಖೆ ಅಡಿಯಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಚಾಲನೆಯಲ್ಲಿವೆ ಎಂದು ಈ ಯೋಜನೆಗಳಿಗೆ ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಳೆದ ವರ್ಷ ಅಜಗುಂಡಿಕೊಪ್ಪ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ನಷ್ಟಗೊಂಡ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಈ ತನಕ ಲಭ್ಯವಾಗಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಮಾರ್ಕಂಡೆಪ್ಪ ಮಣ್ಣಮ್ಮನವರ ಸಭೆಯ ಗಮನಕ್ಕೆ ತಂದರು.
‘ಕೆರೆಗಳನ್ನು ಬಳಸಿಕೊಂಡು ಮೀನುಗಾರಿಕೆ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳುತ್ತೀರಿ. ಅದೇ ಕೆರೆಯನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಏಕೆ ವಹಿಸಿಕೊಳ್ಳುತ್ತಿಲ್ಲ’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪಿ.ದಂದೂರ ಅವರನ್ನು ಸದಸ್ಯರು ಪ್ರಶ್ನಿಸಿದರು.
‘ಮಹಿಳಾ ದೌರ್ಜನ್ಯ ತಡೆಯ ಸಾಂತ್ವನ ಕೇಂದ್ರ ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ತುರ್ತು ಸಂದರ್ಭಕ್ಕಾಗಿ ವಾಹನ ಸೌಲಭ್ಯವೂ ಇಲ್ಲ. ಸಾಂತ್ವನ ಕೇಂದ್ರ 24*7 ಮಾದರಿಯಲ್ಲಿ ಕೆಲಸ ಮಾಡಬೇಕು’ ಎಂದು ಸದಸ್ಯೆ ಅನಿತಾ ಡಿಸೋಜಾ ಆಗ್ರಹಿಸಿದರು.
ಸಭೆ ಆರಂಭದಿಂದಲೇ ಅಧಿಕಾರಿಗಳ ಮೇಲೆ ಗರಂ ಆಗಿದ್ದ ಶಾಸಕ ಮಾನೆ, ತಡವಾಗಿ ಸಭೆಗೆ ಆಗಮಿಸಿದ ಅಧಿಕಾರಿಗಳನ್ನು ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯಗಳ ಕುಂದುಕೊರತೆ ನಿವಾರಣೆ ಸಭೆಗೆ ದಲಿತ ಸಂಘಗಳ ಪ್ರಮುಖರನ್ನು ಆಹ್ವಾನಿಸದ ಅಧಿಕಾರಿ ಜಿ.ಬಿ.ಹಿರೇಮಠ ಅವರನ್ನು ತರಾಟೆಗೆ ತೆಗೆದುಕೊಂಡರು. ಸಹಾಯಕರನ್ನು ಕಳಿಸಿ ಸಭೆಗೆ ಗೈರಾದ ಟಿಎಚ್‌ಒ ಡಾ.ಲಿಂಗರಾಜ್, ಪಿಡಬ್ಲುಡಿ ಎಇಇ ನಾಗರಾಜ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲು ತಾಲ್ಲೂಕು ಪಂಚಾಯಿತಿ ಇಒ ಪರಶುರಾಮ ಪೂಜಾರ ಅವರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.