
ಹಾವೇರಿ: ‘ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ’ ಎಂದು ಆರೋಪಿಸಿ ನಗರಸಭೆಯ ನೀರಗಂಟಿಗಳು ಗುರುವಾರ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.
ಇಲ್ಲಿಯ ನಗರಸಭೆಯ ಎದುರು ಸೇರಿದ್ದ ನೀರಗಂಟಿಗಳು, ವೇತನ ಬಿಡುಗಡೆಗೆ ಒತ್ತಾಯಿಸಿದರು. ‘ವೇತನ ನೀಡದಿದ್ದರೆ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ’ ಎಂದು ಅಳಲು ತೋಡಿಕೊಂಡರು.
‘ಹಾವೇರಿ ನಗರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ 35 ನೀರುಗಂಟಿಗಳು ಕೆಲಸ ಮಾಡುತ್ತಿದ್ದಾರೆ. ನಗರದ ಪ್ರತಿಯೊಂದು ವಾರ್ಡ್‌ಗಳಿಗೆ ನೀರು ಸರಬರಾಜು ಹಾಗೂ ನೀರು ನಿರ್ವಹಣೆ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎಲ್ಲ ನೀರಗಂಟಿಗಳು, ಬಡವರು. ತಿಂಗಳ ವೇತನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ವೇತನ ನೀಡದಿದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.
‘ದೀಪಾವಳಿ ಹಬ್ಬದ ಸಮಯದಲ್ಲಿ ಎರಡು ತಿಂಗಳ ವೇತನ ನೀಡುವುದಾಗಿ ನಗರಸಭೆಯ ಅಧಿಕಾರಿಗಳು ಹೇಳಿದ್ದರು. ಆದರೆ, ಹಬ್ಬ ಮುಗಿದು ಹಲವು ದಿನವಾದರೂ ವೇತನ ಬಂದಿಲ್ಲ. ವೇತನ ಇಲ್ಲದಿದ್ದರಿಂದ, ದೀಪಾವಳಿ ಸಂಭ್ರಮವೂ ಇರಲಿಲ್ಲ. ನಮಗೆ ನಾಲ್ಕು ತಿಂಗಳ ವೇತನವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಮುಂಬರುವ ದಿನಗಳಲ್ಲಿ ವೇತನ ವಿಳಂಬವಾಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
ಪ್ರತಿಭಟನಕಾರರ ಜೊತೆ ಮಾತನಾಡಿದ ನಗರಸಭೆ ಪೌರಾಯುಕ್ತ ಎಚ್. ಕಾಂತರಾಜು, ‘ದೀಪಾವಳಿ ಹಬ್ಬದಂದು ಎರಡು ತಿಂಗಳ ವೇತನವನ್ನು ನೀರಗಂಟಿಗಳ ಖಾತೆಗಳಿಗೆ ಜಮೆ ಮಾಡಲು, ಬ್ಯಾಂಕ್‌ಗೆ ಚೆಕ್ ನೀಡಲಾಗಿತ್ತು. ಆದರೆ, ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಐಎಫ್‌ಎಸ್‌ಸಿ ಕೋಡ್ ಬದಲಾವಣೆಯಾಗಿದೆ. ಬ್ಯಾಂಕ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ನೀರಗಂಟಿಗಳ ಖಾತೆಗಳಿಗೆ ಹಣ ಜಮೆ ಆಗಿಲ್ಲ’ ಎಂದರು.
‘ಬ್ಯಾಂಕ್ ಸಮಸ್ಯೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆಗೆಯೂ ಮಾತನಾಡಲಾಗಿದೆ. ಕೆಲ ಗಂಟೆಗಳಲ್ಲಿಯೇ ಎರಡು ತಿಂಗಳ ವೇತನ ಜಮೆ ಆಗಲಿದೆ. ಉಳಿದಂತೆ ಸೆಪ್ಟೆಂಬರ್ ತಿಂಗಳ ವೇತನವನ್ನೂ ತ್ವರಿತವಾಗಿ ಪಾವತಿ ಮಾಡಲಾಗುವುದು. ಅಕ್ಟೋಬರ್ ಚಾಲ್ತಿಯಲ್ಲಿರುವುದರಿಂದ, ತಿಂಗಳು ಮುಗಿದ ನಂತರ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪೌರಾಯುಕ್ತರು ಭರವಸೆ ನೀಡಿದ್ದರಿಂದ ನೀರಗಂಟಿಗಳು ಪ್ರತಿಭಟನೆ ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.