ADVERTISEMENT

ಮರಳು ದಂಧೆ: ಜಿಲ್ಲಾಧಿಕಾರಿ ದಿಢೀರ್ ಭೇಟಿ, 2 ಜೆಸಿಬಿ, 1 ಹಿಟಾಚಿ ವಶಕ್ಕೆ

ಜೆಸಿಬಿ, ಹಿಟಾಚಿ ಸೇರಿ 1 ಟ್ರ್ಯಾಕ್ಟರ್, ಮೂರು ಸ್ಯಾಂಡ್ ಪಿಲ್ಟರ್ ಮಾಡುವ ಆಯಿಲ್ ಯಂತ್ರಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 13:52 IST
Last Updated 10 ಮೇ 2019, 13:52 IST
ಕುಮಾರಪಟ್ಟಣ ಸಮೀಪದ ಐರಣಿ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ಮರಳು ಸಂಗ್ರಹಿಸುವ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕುಮಾರಪಟ್ಟಣ ಸಮೀಪದ ಐರಣಿ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ಮರಳು ಸಂಗ್ರಹಿಸುವ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.   

ಐರಣಿ (ಕುಮಾರಪಟ್ಟಣ): ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಸಮೀಪ ಇರುವ ತುಂಗಭದ್ರಾ ನದಿ ದಂಡೆಯಲ್ಲಿ ಸ್ಥಾಪಿಸಿರುವ ಮೂರು ಮರಳು ಸಂಗ್ರಹಣಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಅವರು ಮಾತನಾಡಿ, ‘ಸರ್ಕಾರದ ನಿಯಮ ಮೀರಿ ನದಿಯಿಂದ ಮರಳು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದೆ’ ಎಂದು ಹೇಳಿದರು.

ಯಂತ್ರಗಳನ್ನು ಬಳಸಿ ನದಿಯಿಂದ ಮರಳನ್ನು ಹೊರ ತೆಗೆಯಬಾರದು ನಿಯಮವಿದೆ. ಸರ್ಕಾರದ ಅನುಮತಿ ಪಡೆದು ಮರಳು ಸಂಗ್ರಹಿಸುವವರೂ ನಿಯಮ ಉಲ್ಲಂಘಿಸುವಂತಿಲ್ಲ. ಪ್ರಕೃತಿಯ ಸಂಪತ್ತು ರಕ್ಷಿಸಿಸುವುದು ಎಲ್ಲರ ಹೊಣೆ ಎಂದರು.

ADVERTISEMENT

ಐರಣಿ ಗ್ರಾಮದ ಆಂಜನೇಯ ನಾಗೇನಹಳ್ಳಿ ‘ದಿನದ 24 ಗಂಟೆ ಯೂ ಯಂತ್ರಗಳ ಸಹಾಯದಿಂದ ಅವ್ಯಾಹತವಾಗಿ ಮರಳು ತುಂಬುತ್ತಿ ದ್ದಾರೆ. ಇಲ್ಲಿಯೇ ಹವಾನಿಯಂತ್ರಿತ ಕೊಠಡಿ ನಿರ್ಮಿಸಿದ್ದಾರೆ’ ಎಂದು ಜಿಲ್ಲಾಧಿಕಾರಿಗೆ ವಿವರಿಸಿದರು.

ಜಿಲ್ಲಾಧಿಕಾರಿಗಳು ಕೊಠಡಿಯನ್ನು ನೋಡಲು ಮುಂದಾದಾಗ, ಕೀ ಇಲ್ಲ ಎಂದು ಸಿಬ್ಬಂದಿ ನುಣುಚಿಕೊಂಡರು. ಬೀಗ ತೆರವುಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದ ಡಿ.ಸಿ, ಒಳಗೆ ಹೋಗಿ ತಪಾಸಣೆ ಮಾಡಿದರು.

ಮರಳು ಸಂಗ್ರಹ ಕೇಂದ್ರದಲ್ಲಿದ್ದ 2 ಜೆಸಿಬಿ, 1 ಹಿಟಾಚಿ, 1 ಟ್ರಾಕ್ಟರ್, ಮೂರು ಸ್ಯಾಂಡ್ ಫಿಲ್ಟರ್ ಮಾಡುವ ಆಯಿಲ್ ಮಷಿನ್‍‍ಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ವಶಕ್ಕೆ ಪಡೆದರು.

ರಾಣೆಬೆನ್ನೂರು ತಾಲ್ಲೂಕು ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ್ ಸಗರಿ, ಕಂದಾಯ ನಿರೀಕ್ಷಕ ಎಚ್.ಕೆ.ಚಲವಾದಿ, ಗ್ರಾಮ ಲೆಕ್ಕಾಧಿಕಾರಿ ಯುವರಾಜ್ ನಾಯ್ಕ, ಪ್ರಕಾಶ್, ಎಪಿಎಂಸಿ ಸದಸ್ಯ ಸುರೇಶ ಬಿರಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.