ADVERTISEMENT

ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 8:20 IST
Last Updated 8 ಜನವರಿ 2026, 8:20 IST
ಶಿಗ್ಗಾವಿ ಪಟ್ಟಣದ ವಿರಕ್ತಮಠದ ಆವಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಇತ್ತೀಚೆಗೆ ನಡೆದ ಬೆಳದಿಂಗಳ ನೋಟ, ಸತ್ಸಂಗದ ಕೂಟ-1 ಕಾರ್ಯಕ್ರಮದಲ್ಲಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಶಿಗ್ಗಾವಿ ಪಟ್ಟಣದ ವಿರಕ್ತಮಠದ ಆವಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಇತ್ತೀಚೆಗೆ ನಡೆದ ಬೆಳದಿಂಗಳ ನೋಟ, ಸತ್ಸಂಗದ ಕೂಟ-1 ಕಾರ್ಯಕ್ರಮದಲ್ಲಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಶಿಗ್ಗಾವಿ: ಸತ್ಸಂಗಗಳು ಸರ್ವ ಸಮುದಾಯದ ಜನರಲ್ಲಿ ಪರಸ್ಪರ ಬಾಂಧವ್ಯಗಳ ಕೊಂಡಿಯನ್ನು ಬೇಸೆಯುವ ಕಾರ್ಯ ಮಾಡುತ್ತಿವೆ. ಹೀಗಾಗಿ ಪ್ರವಚನ, ಸತ್ಸಂಗಗಳನ್ನು ಕೇಳುವ ಜತೆಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಸಮಾನತೆ, ಒಗ್ಗಟ್ಟಿನ ಮನೋಭಾವಗಳನ್ನು ಕಟ್ಟುವ ಕೆಲಸ ನಮ್ಮೆಲ್ಲರದಾಗಬೇಕು ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ವಿರಕ್ತಮಠದ ಆವಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಇತ್ತೀಚೆಗೆ ನಡೆದ ಬೆಳದಿಂಗಳ ನೋಟ, ಸತ್ಸಂಗದ ಕೂಟ-1 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳದಿಂಗಳೂಟ ಭಾವೈಕ್ಯದ ಸಂಕೇತವಾಗಿದ್ದು, ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸಿ ಗಟ್ಟಿಗೊಳಿಸುವ ವೇದಿಕೆಯಾಗಿ, ಹಂಚಿ ತಿನ್ನುವ, ಪ್ರೀತಿ, ವಿಶ್ವಾಸ ನಂಬಿಕೆಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಮನುಷ್ಯ ಜೀವನದ ಜಂಜಾಟಗಳಿಂದ ಹೊರಬರಬೇಕಾದರೆ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಒಳ್ಳೆಯ ವಿಚಾರಗಳನ್ನು ಆಲಿಸಿ ಅಳವಡಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.

ADVERTISEMENT

ಸಾತ್ವಿಕ ಆಹಾರವನ್ನು ಸವಿಯುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಪ್ರಥಮವಾಗಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ವಿರಕ್ತಮಠ ಸಹಕಾರಿಯಾಗಿದೆ. ಸಮಾಜ ವಿಕಾಸದ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ವಚನ ನಿಧಿ ವನಿತಾ ಸಂಘದ ಅಧ್ಯಕ್ಷೆ ಡಾ.ಲತಾ ನಿಡಗುಂದಿ, ನಿವೃತ್ತ ಶಿಕ್ಷಕಿ ಪ್ರತಿಭಾ ಗಾಂಜಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ಸಾಹಿತಿಗಳಾದ ದೇವರಾಜ ಸುಣಗಾರ , ವಿಶ್ವನಾಥ ಬಂಡಿವಡ್ಡರ ಕವನವಾಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾವಿ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ ಬೆಳದಿಂಗಳ ನೋಟ ಸತ್ಸಂಗದ ಕೂಟ ಕಾರ್ಯಕ್ರಮಕ್ಕೆ ರುಚಿಯಾದ ಹೋಳಿಗೆ ಊಟದ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ, ಕ.ಸಾ.ಪ ಬಂಕಾಪೂರ ಹೋಬಳಿ ಘಟಕದ ಅಧ್ಯಕ್ಷ ಎ.ಕೆ.ಅದ್ವಾನಿಮಠ, ಸಿ.ಡಿ ಯತ್ನಳ್ಳಿ, ಶಶಿಕಾಂತ ರಾಠೋಡ, ಬಸುವರಾಜ ಶಿಗ್ಗಾವಿ, ಫಕ್ಕಿರೇಶ ಕೊಂಡಾಯಿ, ಹನುಮಂತಪ ಯು.ವಿ, ರಮೇಶ ಎಚ್, ಅಶೋಕ ಕಾಳೆ, ಶಿವಾನಂದ ಹೊಸಮನಿ, ಶಂಭು ಕೇರಿ, ಸಿ.ಎನ್.ಕಲಕೋಟಿ, ರವಿ ಕಡಕೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.