ಶಿಗ್ಗಾವಿ: ಪಟ್ಟಣದ ಸ್ವಚ್ಚತೆ ಮತ್ತು ಸುಂದರವಾಗಿ ಕಾಣಲು ಪೌರಕಾರ್ಮಿಕರ ಶ್ರಮ ಮುಖ್ಯವಾಗಿದೆ. ಅದರಿಂದ ಪಟ್ಟಣದ ಜನತೆಯ ಆರೋಗ್ಯ ಕಾಪಾಡಲು ಸಾಧ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಪೌರಾಡಳಿತ ಇಲಾಖೆ ಪುರಸಭೆ ಕಾರ್ಯಾಲಯದ ವತಿಯಿಂದ ನಡೆದ ಪುರಸಭೆ ಪೌರಕಾರ್ಮಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಪಟ್ಟಣದ ಸ್ವಚ್ಚತೆ ಜತೆಗೆ ತಮ್ಮ ವೈಯಕ್ತಿಕ ಆರೋಗ್ಯ ಕಾಪಾಡುವ ಕಡೆ ಗಮನವಿರಲಿ. ದುಶ್ಚಟಗಳನ್ನು ಬಿಟ್ಟು ಮಕ್ಕಳು, ಕುಟುಂಬದ ಆರ್ಥಿಕ ಬೆಳವಣಿಗೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿರಿ ಎಂದರು.
ಪುರಸಭೆ ಸದಸ್ಯ ಪರಶುರಾಮ್ ಸೊನ್ನದ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು ಎಂದರು.
ರಾಜ್ಯ ಕಾರ್ಮಿಕರ ಸಂಘದ ಅಧ್ಯಕ್ಷ ಫಕ್ಕಿರೇಶ ಶಿಗ್ಗಾವಿ ಮಾತನಾಡಿ, ಪೌರಕಾರ್ಮಿಕರ ಸಾಕಷ್ಟು ಸಮಸ್ಯೆಗಳಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಕಾರ್ಮಿಕರ ಬಗ್ಗೆ ಅನುಕಂಪ ತೋರುವ ಬದಲು, ಅವರ ಬೇಡಿಕೆಗಳನ್ನು ಪೂರೈಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪೌರಕಾರ್ಮಿಕರಾಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳನ್ನು ನಡೆಸಿ ಅದರಲ್ಲಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪುರಸಭೆ ಸದಸ್ಯರಾದ ಮಂಜುನಾಥ ಬ್ಯಾಹಟ್ಟಿ, ಸುಲೇಮಾನ್ ತರ್ಲಗಟ್ಟ, ಜಾಫರ್ ಖಾನ್ ಪಠಾಣ್, ಲಕ್ಷ್ಮಿ ಮಾಳಗಿ, ಮೆಹಬೂಬಿ ನೀರಲಗಿ, ಸಮುದಾಯ ಸಂಘಟಕ ಬಿ.ಎಸ್. ಗಿಡ್ಡಣ್ಣವರ, ಲಕ್ಷ್ಮಣ ಪೂಜಾರ, ಕೆ.ಎಲ್.ಭೋವಿ, ಗೀರಿಜಮ್ಮ ಹಾದಿಮನಿ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಎಲ್ಲ ಪೌರಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.