ADVERTISEMENT

ಸಂತೋಷಗೆ ಹ್ಯಾಟ್ರಿಕ್‌ ‘ಸರ್ವೋತ್ತಮ ಪ್ರಶಸ್ತಿ’

ಪೊಲೀಸ್‌ ಕ್ರೀಡಾಕೂಟ: ಓಟ, ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ

ಮಂಜುನಾಥ ರಾಠೋಡ
Published 21 ಜನವರಿ 2020, 13:30 IST
Last Updated 21 ಜನವರಿ 2020, 13:30 IST
ಹಾವೇರಿಯಲ್ಲಿ ಈಚೆಗೆ ನಡೆದ ಪೊಲೀಸ್‌ ಕ್ರೀಡಾಕೂಟದಲ್ಲಿ ‘ಸರ್ವೋತ್ತಮ’ ಪ್ರಶಸ್ತಿ ಪಡೆದ ಸಂತೋಷ ನಾಯಕ 
ಹಾವೇರಿಯಲ್ಲಿ ಈಚೆಗೆ ನಡೆದ ಪೊಲೀಸ್‌ ಕ್ರೀಡಾಕೂಟದಲ್ಲಿ ‘ಸರ್ವೋತ್ತಮ’ ಪ್ರಶಸ್ತಿ ಪಡೆದ ಸಂತೋಷ ನಾಯಕ    

ಹಾವೇರಿ: ಪೊಲೀಸ್ ಇಲಾಖೆ ವತಿಯಿಂದ ನಡೆಯುವ ಕ್ರೀಡಾಕೂಟದಲ್ಲಿ ಸಂತೋಷ ನಾಯಕ ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಾ, ಸತತ ಮೂರು ವರ್ಷಗಳಿಂದ ‘ಸರ್ವೋತ್ತಮ ಪ್ರಶಸ್ತಿ’ಗೆ ಭಾಜನರಾಗುತ್ತಿದ್ದಾರೆ.

ಪ್ರೌಢಶಾಲಾ ಹಂತದಿಂದ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಸಂತೋಷ ಅಥ್ಲೆಟಿಕ್ಸ್‌ ಹಾಗೂ ಗುಂಪು ಆಟದಲ್ಲಿ ಪರಿಣತಿ ಪಡೆದಿದ್ದಾರೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿರುವಾಗ ಮೈದಾನದ ಮುಖವನ್ನೇ ನೋಡದ ಅವರು ವಿವಿಧ ತಾವು ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ಪ್ರಾಥಮಿಕ ಶಾಲೆ ಕಲಿಯುವ ಸಂದರ್ಭದಲ್ಲಿ ಆಟೋಟಕ್ಕೆ ಅಷ್ಟಾಗಿ ಪ್ರೋತ್ಸಾಹ ಸಿಕ್ಕಿರಲಿಲ್ಲ. ಪ್ರೌಢಶಾಲೆಯಲ್ಲಿ ಒಂದು ಹಂತಕ್ಕೆ ಆಟಗಳ ಮಹತ್ವ ಅರಿವಾಯಿತು. ಬಳಿಕ, ಪಿಯುಸಿ ಬಂದ ನಂತರ ಓಟ, ಕೊಕ್ಕೊ, ಕಬಡ್ಡಿಯಲ್ಲಿ ತೊಡಗಿಸಿಕೊಂಡೆ ಎನ್ನುತ್ತಾರೆ ಸಂತೋಷ ನಾಯಕ.

ADVERTISEMENT

ಪೊಲೀಸ್ ಇಲಾಖೆಗೆ ಸೇರಿದಾಗಿನಿಂದ ದೇಹದಂಡನೆ, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಇಲಾಖೆ ಕ್ರೀಡಾ ಕೂಟದಲ್ಲಿ 100 ಮೀ, 200ಮೀ, ಹಗ್ಗಜಗ್ಗಾಟ, ಕಬಡ್ಡಿ, ವಾಲಿಬಾಲ್ ಹಾಗೂ ರಿಲೇಯಲ್ಲಿಯೂ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಅಲ್ಲದೆ, ನಮ್ಮ ಇಲಾಖೆಯಲ್ಲಿಯೂ ಸಿಬ್ಬಂದಿಯೊಂದಿಗೆ ನಿತ್ಯ ಅಭ್ಯಾಸ ಮಾಡುತ್ತೇನೆ ಎಂದು ಅವರು ವಿವರಿಸಿದರು.

2007ರಲ್ಲಿ ಪಿಯುಸಿ ಸಂದರ್ಭದಲ್ಲಿ 110 ಮೀ. ಹರ್ಡಲ್ಸ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದೆ. ಬಳಿಕ ಅದೇ ವರ್ಷ ನಡೆದ ರಾಜ್ಯ ಮಟ್ಟದ ಕ್ರೀಡೆಯಲ್ಲಿ 5 ನೇ ಸ್ಥಾನ ಪಡೆದಿದ್ದೇನೆ. 2010–11ರಲ್ಲಿ ಡಿ.ಇಡಿ ಮಾಡುವ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 100 ಮೀ., 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡದಿದ್ದೆ. ಆದರೆ, ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪ್ರಶಸ್ತಿ ಪಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2013ರಿಂದ ಪೊಲೀಸ್ ಇಲಾಖೆ ಸೇವೆ:

2013ರಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿ ದೈಹಿಕ ಸಾಮರ್ಥ್ಯ ಬಹಳ ಮುಖ್ಯವಾಗಿದೆ. ಅದರಿಂದಾಗಿ ದೈಹಿಕ ಕಸರತ್ತು ಮಹತ್ವದ ಪಾತ್ರ ವಹಿಸುತ್ತದೆ. ಸೋಲು– ಗೆಲುವನ್ನು ಸಮನಾಗಿ ಸ್ವೀಕಾರ ಮಾಡಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗಪ್ರತಿಬಾರಿ ಹೊಸ ಅನುಭವವಾಗುತ್ತದೆ ಎಂದರು.

ಇಲಾಖೆ ನಡೆಸುವ ಕ್ರೀಡೆಯಲ್ಲಿ ವೈಯಕ್ತಿಕ ವೀರಾಗ್ರಣಿ ಹಾಗೂ ಸರ್ವೋತ್ತಮ ಪ್ರಶಸ್ತಿಯನ್ನೂ ಪಡೆಯುತ್ತಿದ್ದೇನೆ. ಇಲಾಖೆಯಿಂದ ಕ್ರೀಡೆಗೆ ಸಹಕಾರವೂ ಇದೆ ಎನ್ನುತ್ತಾರೆ ಸಂತೋಷ.

ಓದುವ ಹವ್ಯಾಸ: ವಿವಿಧ ಹುದ್ದೆಗೆ ಬೇಕಾಗುವ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯನ್ನು ನಿತ್ಯ ಮಾಡುತ್ತೇನೆ. ಕೆಲಸದೊಂದಿಗೆ ಆಟ, ಓದು ಇವು ಎರಡಕ್ಕೂ ಸಮಯವನ್ನು ಮೀಸಲಿಟ್ಟಿರುತ್ತೇನೆ. ಜತೆಗೆ ಕಥೆ, ಕಾದಂಬರಿಯ ಪುಸ್ತಕಗಳನ್ನು ಓದುತ್ತೇನೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.