ADVERTISEMENT

ಸದಸ್ಯರಿಂದ ಅಧಿಕಾರಿಗಳಿಗೆ ತರಾಟೆ

ಸದಸ್ಯರ ಗಮನಕ್ಕೆ ಬಾರದೆ ಕ್ರಿಯಾ ಯೋಜನೆ ತಯಾರಿಸಿದ ಮುಖ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:51 IST
Last Updated 18 ಜೂನ್ 2025, 15:51 IST
ಸವಣೂರು ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ಅಬ್ದುಲಖಾದರ ಫರಾಶ ಮುಖ್ಯಾಧಿಕಾರಿ ನೀಲಪ್ಪ ಕಟ್ಟಿಮನಿ ಅವರನ್ನು ತರಾಟೆಗೆ ತೆಗೆದುಕೊಂಡಿರುವದು.
ಸವಣೂರು ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ಅಬ್ದುಲಖಾದರ ಫರಾಶ ಮುಖ್ಯಾಧಿಕಾರಿ ನೀಲಪ್ಪ ಕಟ್ಟಿಮನಿ ಅವರನ್ನು ತರಾಟೆಗೆ ತೆಗೆದುಕೊಂಡಿರುವದು.   

ಸವಣೂರು: ಕಾಮಗಾರಿಗಳ ಕ್ರಿಯಾ ಯೋಜನೆ ಕುರಿತು ಸದಸ್ಯರೊಂದಿಗೆ ಚರ್ಚಿಸದೇ ಏಕ ಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡು ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ ಎಂದು ಹೇಳುತ್ತಿರಿ. ಎಲ್ಲ ಸದಸ್ಯರ ಜೊತೆ ಚರ್ಚೆ ಮಾಡಿದ್ದೀರಾ? ನಿಮಗೆ ಹೇಗೆ ಬೇಕೋ ಹಾಗೇ ಸರ್ವಾಧಿಕಾರ ನಡೆಸುವುದಾದರೆ ನಮ್ಮನ್ನು ಏಕೆ ಸಭೆ ಆಹ್ವಾನ ನೀಡಿದ್ದೀರಿ ಎಂದು ಪುರಸಭೆ ಸದಸ್ಯ ಅದ್ದು ಪರಾಷ್ ಮುಖ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸವಣೂರು ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿದ ಸಾಮಾನ್ಯಸಭೆಯಲ್ಲಿ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರು ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಹೇಳಿ ದೃಢೀಕರಿಸುತ್ತಿದ್ದಂತೆ ಸದಸ್ಯ ಫರಾಶ, ಹಿಂದಿನ ಸಭೆಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ಕುರಿತು ಎಲ್ಲ ಸದಸ್ಯರ ಜೊತೆ ಚರ್ಚಿಸುವುದಾಗಿ ಹೇಳಿದ್ದಿರಿ? ಹಾಗೇ ಮಾಡದೇ ಈ ಸಭೆಯಲ್ಲಿ ಹೇಗೆ ಮಂಜೂರಾತಿ ದೃಢೀಕರಿಸಿದರಿ ಎಂದು ಸಭೆಯಲ್ಲಿ ಪ್ರಶ್ನಿಸಿದರು.

ಅವರು, ಸಭೆಯಲ್ಲಿ ಸದಸ್ಯರಿಂದ ಚರ್ಚೆಯಾಗುವ ವಿಷಯಗಳ ಕುರಿತು ರೆಜಿಸ್ಟರದಲ್ಲಿ ರೆಕಾರ್ಡ್‌ ಮಾಡುವುದಾದರೆ ಸಭೆಯನ್ನು ಕರೆಯಿರಿ. ಪುರಸಭೆಯ ಜಮಾ, ಖರ್ಚಿನಲ್ಲಿ ಪ್ರತಿ ತಿಂಗಳಿಗೆ ಮೋಟರ್ ರಿಪೇರಿ ₹2 ರಿಂದ ₹3 ಲಕ್ಷ ಖರ್ಚು ತೋರಿಸುತ್ತಿದ್ದಿರಿ, ಶಾಮಿಯಾನಗೆ ₹ 3 ಲಕ್ಷ ಖರ್ಚು ತೋರಿಸಿದ್ದಿರಿ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.  

ADVERTISEMENT

ಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರಿಗೆ ದರ ಮಂಜೂರಾತಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಸರ್ಕಾರದ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದರಕ್ಕೆ ಗುತ್ತಿಗೆದಾರರು ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಕಾಮಗಾರಿ ಮಾಡುತ್ತಾರೋ ಅಥವಾ ರಸ್ತೆಗೆ ಮಣ್ಣೆರಚಿ ಹೋಗುತ್ತಾರೋ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಮುಖ್ಯಾಧಿಕಾರಿ ಕಟ್ಟಿಮನಿ ಉತ್ತರಿಸಿ, ಕೆಲಸ ಮಾಡುವುದು ಗುತ್ತಿಗೆದಾರರಿಗೆ ಬಿಟ್ಟಿದ್ದು. ಕೆಲಸದ ಗುಣಮಟ್ಟವನ್ನು ಸ್ಥಳದಲ್ಲಿಯೆ ಪರೀಕ್ಷಿಸಿ ಕೆಲಸವನ್ನು ತೆಗೆದುಕೊಳ್ಳಲಾಗುವುದು ಎಂದರು.

- ಟೆಂಡರ್‌ ದರ ಮುಂದುವರಿಸಲು ಸೂಚನೆ

2022-23ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದ 4 ಕಾಮಗಾರಿಗಳ ಟೆಂಡರ್ ದರಗಳಿಗೆ ಅನುಮೋದನೆ ನೀಡಲಾಯಿತು. 2025-26ನೇ ಸಾಲಿನ ಅವಧಿಗೆ ಪುರಸಭೆ ವಾಹನ ಚಾಲಕರು ಲೋಡರ್ಸ್‌ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೊರಗುತ್ತಿಗೆ ಮೂಲಕ ಪೂರೈಸುವ ಟೆಂಡರ್‌ ದರ ಮಂಜುರಾತಿ ನೀರು ಸರಬರಾಜು ವಿಭಾಗದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಹೊರಗುತ್ತಿಗೆ ಟೆಂಡರ್ ಪ್ರಕ್ರಿಯೆ ಅಂತಿಮವಾಗುವರೆಗೂ 2024–25ನೇ ಸಾಲಿನ ಟೆಂಡರ್‌ ದರ ಮುಂದುವರೆಸಲು ಮಂಜುರಾತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ್ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಖಮರುನ್ನಿಸಾ ಪಟೇಲ್ ಸ್ಥಾಯಿ ಸಮಿತಿ ಚೇರಮನ್ ಎಸ್.ಆರ್.ಕಲ್ಮಠ ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಎಂಜಿನಿಯರ್ ನಾಗರಾಜ ಮಿರ್ಜಿ ಸೇರಿದಂತೆ ಪುರಸಭೆ ಎಲ್ಲ ಸದಸ್ಯರು ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.