ಸವಣೂರು: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ– ₹1 ಲಕ್ಷ ಮೌಲ್ಯದ ಮೇವು ಭಸ್ಮ
ಸವಣೂರು (ಹಾವೇರಿ ಜಿಲ್ಲೆ): ಆಕಸ್ಮಿಕವಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ದನದ ಕೊಟ್ಟಿಗೆಯಲ್ಲಿದ್ದ ಮೇವು ಸಂಪೂರ್ಣ ಹಾನಿಯಾದ ಘಟನೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ನಿವಾಸಿ ಮಂಜುನಾಥ ಅರಳಿಕಟ್ಟಿ ಎಂಬುವರಿಗೆ ಸೇರಿದ ಹಳೆಯ ಮನೆ ಎಂದು ತಿಳಿದು ಬಂದಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ದನದ ಕೊಟ್ಟಿಗೆ ಮಾಡಿದ್ದ ಹಳೆಯ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬ ದೂರು ಸಾರ್ವಜನಿಕರದ್ದಾಗಿದೆ.
ಈ ವೇಳೆ ಹೊಗೆಯ ಪ್ರಮಾಣ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಆತಂಕಕ್ಕೆ ಒಳಗಾಗಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾ.ಪಂ ಪಿಡಿಒ ನೀರು ಸರಬರಾಜುಗೊಳಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ಹಾನಿ ತಪ್ಪಿದೆ.
ಸ್ಥಳಕ್ಕೆ ಧಾವಿಸಿದ ಸವಣೂರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ದನಗಳಿಗೆ ಸಂಗ್ರಹಿಸಿದ ಮೇವು ಸಂಪೂರ್ಣ ಹಾನಿಯಾಗಿದ್ದು ಮನೆಯ ಕಟ್ಟಿಗೆ ಕಂಬಗಳು ಸಹ ಹಾನಿಯಾಗಿವೆ. ಕೊಟ್ಟಿಗೆಯಲ್ಲಿ ದನಗಳಿಲ್ಲದ ಕಾರಣ ಪ್ರಾಣಿ ಹಾನಿ ತಪ್ಪಿದ್ದು ಸುಮಾರು ₹1 ಲಕ್ಷ ಹಾನಿ ಎಂದು ಅಂದಾಜಿಸಲಾಗಿದೆ.
ಈ ವೇಳೆ ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ ಭೊವಿ, ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ ಮೇಟಿ, ಸಿಬ್ಬಂದಿಗಳಾದ ಮಂಜುನಾಥ ತವರಿ, ಸುರೇಶ್ ಗುಂಜಳ, ವಿನಯ ವಡೆರಟ್ಟಿ ಸೇರಿದಂತೆ ಗ್ರಾ.ಪಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.