
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾಧಕರಾದ ಅಲಕಾ ಸಿಂಧೂರ, ಬಿ.ಎಂ.ಪಾಟೀಲ, ಡಾ. ರಾಜಶೇಖರ ಮೂಲಿಮನಿ, ಲಾ. ಮೋಹನ ರಾಯ್ಕರ, ಡಾ. ಶಿಲ್ಪಾ ಚಂದ್ರಶೇಖರಯ್ಯ ಮಠಪತಿ, ಗುರುಮಹಾಂತಯ್ಯ ಆರಾಧ್ಯಮಠ, ವೀರೇಶ ಸಂಕೀನಮಠ, ವೀಣಾ ವೀರನಗೌಡ್ರ ಅವರನ್ನು ಸನ್ಮಾನಿಸಲಾಯಿತು
ಸವಣೂರು: ‘ಕನ್ನಡವು ಕ್ರಿಸ್ತ ಪೂರ್ವಕ್ಕಿಂತ ಮೊದಲು ಇರುವಂಥ ಭಾಷೆಯಾಗಿದೆ. ಹಳೆಯ ಇತಿಹಾಸ ಹೊಂದಿರುವ ಭಾಷೆ ಮತ್ತು ನುಡಿ ನಮ್ಮ ರಾಜ್ಯದ್ದು ಎನ್ನುವುದನ್ನು ಅಭಿಮಾನದಿಂದ ಹೇಳಬೇಕಿದೆ. ಪ್ರಾಚೀನ ಕಾಲದ ಇತಿಹಾಸ ಹೊಂದಿದ ರಾಜ್ಯದಲ್ಲಿ ಜನಿಸಿದ ನಾವು ಪುಣ್ಯವಂತರು’ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜರುಗಿದ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳು ಎಲ್ಲವೂ ಸತ್ಯವೆಂದು ಭಾವಿಸಬಾರದು. ಕುವೆಂಪು ಅವರು ರಚಿಸಿದ ನಾಡ ಗೀತೆಯಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅತ್ಯುತ್ತಮವಾಗಿ ವರ್ಣಿಸಿ ಸರ್ವಧರ್ಮ ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಫೇಸ್‍ಬುಕ್, ವಾಟ್ಸ್‌ಆ್ಯಪ್ ಮೂಲಕ ಸತ್ಯವನ್ನು ಮರೆಮಾಚುವಂತ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದರ ಮೂಲಕ ಕರ್ನಾಟಕದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿ, ಅಧಿಕಾರ, ಹಣದಾಸೆಗೆ ಆತ್ಮ ಸಂತೋಷಕ್ಕಾಗಿ ಧರ್ಮಗಳನ್ನು ಒಡೆಯುವಂಥ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡದೇ ಸರ್ವಜನಾಂಗದ ಶಾಂತಿಯ ತೋಟದಂತೆ ಜೀವಿಸೋಣ’ ಎಂದು ಹೇಳಿದರು.
‘ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕನಕದಾಸರು, ಸಂತ ಶಿಶುವಿನಹಾಳ ಶರೀಫರು, ವಿ.ಕೃ. ಗೋಕಾಕರು ಸೇರಿದಂತೆ ಹಲವು ದಾರ್ಶನಿಕರು ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ’ ಎಂದರು.
‘ವರದಾ-ಬೇಡ್ತಿ ಮತ್ತು ಧರ್ಮಾ ನದಿಗಳ ಜೋಡಣೆಯಿಂದ ಹಾವೇರಿ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ನದಿಗಳ ಜೋಡಣೆಯ ಡಿಪಿಆರ್‌ಗೆ ಕೇಂದ್ರದಿಂದ ಅನುಮೋದನೆ ಕೊಡಿಸಬೇಕು’ ಎಂದು ಒತ್ತಾಯಿಸಿದರು.
ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ‘ಕನ್ನಡ ಭಾಷೆ, ಸಂಸ್ಕೃತಿ, ಕನ್ನಡದ ಉಳಿವಿಗಾಗಿ ನಾವೆಲ್ಲರೂ 69 ವರ್ಷಗಳಿಂದ ಹೋರಾಡುತ್ತಿದ್ದೇವೆ. 1956ರಲ್ಲಿ ಪ್ರಾದೇಶಿಕ ಭಾಷೆಗಳು ಪ್ರಾಂತವಾರು ಆದ ಮೇಲೆ 2025ಕ್ಕೆ 69 ವರ್ಷವಾದರೂ ನಾವಿನ್ನೂ ಹಿಂದುಳಿದ್ದೇವೆ ಎನ್ನುವಂಥ ಸಂಶಯ ಎದುರಿಗೆ ಬಂದು ನಿಂತಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಉಳಿಸೋಣ, ಕನ್ನಡ ಬೆಳೆಸೋಣ, ಹೋರಾಟ ಮಾಡೋಣ ಎನ್ನುವದರಲ್ಲೇ ಕಾಲ ಕಳೆದಿದ್ದೇವೆ. ಮಾಡಬೇಕಾದದ್ದು ಯಾರು ಎನ್ನುವಂಥ ಪ್ರಶ್ನೆ ಹಾಗೆಯೇ ಉಳಿದಿದೆ’ ಎಂದು ಹೇಳಿದರು.
‘ನಮ್ಮ ಸಂಸ್ಕೃತಿ, ಪರಂಪರೆಗೆ ಪೂರಕವಾದ ಭಾಷೆಗಳನ್ನು ಬೆಳೆಸುವಂಥ ಕರ್ತವ್ಯ ಕೇವಲ ರಾಜಕಾರಣಿಗಳಿಗೆ, ಪತ್ರಕರ್ತರಿಗೆ, ಸಾಹಿತಿಗಳಿಗೆ, ಕವಿಗಳಿಗೆ ಸೀಮಿತವಲ್ಲ. ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂಬುದನ್ನು ಅರಿತುಕೊಳ್ಳಬೇಕು. ಕನ್ನಡ ನಾಡಿನಲ್ಲಿ ಸುಮಾರು 4ಸಾವಿರ ಕನ್ನಡ ಶಾಲೆಗಳನ್ನು ಬಂದ್ ಮಾಡಬೇಕು ಎನ್ನುವಂಥದ್ದು ಖೇದಕರ ಸಂಗತಿ. ಕನ್ನಡ ಶಾಲೆಗಳಲ್ಲಿ ಅಲ್ಪ ವಿದ್ಯಾರ್ಥಿಗಳಿದ್ದು ಏಕೋಪಾಧ್ಯಾಯ ಶಾಲೆಗಳಿದ್ದರೂ ಕೂಡ ಅವುಗಳನ್ನು ಉಳಿಸುವಂಥ ಕೆಲಸ ಮಾಡಬೇಕು. ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಕೇವಲ ತಾಲ್ಲೂಕು ಕೇಂದ್ರಕ್ಕೆ ಸೀಮಿತಗೊಳಿಸದೇ ಗ್ರಾಮಗಳಲ್ಲೂ ಆಯೋಜನೆ ಮಾಡುವ ನಿರ್ಣಯವನ್ನು ಮಾಡಬೇಕು’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಎಚ್.ಐ. ತಿಮ್ಮಾಪುರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರಮುಖರಾದ ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಮಹೇಶ ಅಪ್ಪಣ್ಣನವರ, ಲಕ್ಷ್ಮಣ ಕನವಳ್ಳಿ, ಆನಂದ ವಡಕಮ್ಮನವರ, ಎಸ್.ಡಿ. ದೆವಗಪ್ಪನವರ, ಯೋಗೇಂದ್ರ ಜಂಬಗಿ, ಧರಿಯಪ್ಪಗೌಡ ಪಾಟೀಲ, ಜೀಶಾನಖಾನ್ ಪಠಾಣ, ತಹಶೀಲ್ದಾರ್ ರವಿಕುಮಾರ ಕೊರವರ, ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಪಾಲ್ಗೊಂಡಿದ್ದರು.
ಶಿಕ್ಷಕರಾದ ವಿದ್ಯಾಧರ ಕುತನಿ, ಎನ್.ಎನ್.ಬಸನಾಳ, ಎಸ್.ವಿ.ಕೋಳಿವಾಡ, ಆರ್.ಎಸ್.ಪೂಜಾರ, ಎಸ್.ಬಿ.ಹೊಸಮನಿ, ಎಂ.ಎಂ.ಯಳವತ್ತಿ ಕಾರ್ಯಕ್ರಮ ನಿರ್ವಹಿಸಿದರು. ನಂತರ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಹಿತ್ಯ ಭವನಕ್ಕೆ ಅನುದಾನ: ಭರವಸೆ
‘ಸವಣೂರು ತಾಲ್ಲೂಕಿನಲ್ಲಿ ಸಾಹಿತ್ಯ ಭವನಕ್ಕೆ ನೀವೇಶನ ಕೇಳಿದ್ದಾರೆ. ಆದಷ್ಟು ಬೇಗ ಸ್ಥಳವನ್ನು ಗುರುತಿಸಿದರೆ ಆದಷ್ಟು ಬೇಗ ಕೆಲಸ ಮಾಡಿಸುತ್ತೇನೆ. ರಾಜ್ಯ ಸರ್ಕಾರ ನ. 1ರಂದು ಜ್ಞಾನಪೀಠ ಪುರಸ್ಕೃತರ ಜನ್ಮಸ್ಥಳಕ್ಕೆ ₹ 1 ಕೋಟಿ ಅನುದಾನ ನೀಡುತ್ತಿದೆ. ಅದೇ ಹಣದಲ್ಲಿ ನಿವೇಶನವನ್ನು ಖರೀದಿಸಿ ಸಾಹಿತ್ಯ ಭವನವನ್ನು ನಿರ್ಮಾಣ ಮಾಡಿ ಕನ್ನಡಕ್ಕೆ ಶೋಭೆ ತರುವಂಥ ಕೆಲಸ ಮಾಡುತ್ತೇನೆ’ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.