ಹಾವೇರಿ: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸಮುದಾಯದ ಜನರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಪ್ರತಿಭಟನಕಾರರು, ‘ಒಳ ಮೀಸಲಾತಿ ಜಾರಿ ಮಾಡಿ, ಸುಪ್ರೀಂಕೋರ್ಟ್ ತೀರ್ಪಿಗೆ ಗೌರವ ಕೊಡಿ’, ‘ಸಮಪಾಲು ಸಮಬಾಳು ಸಾಮಾಜಿಕ ನ್ಯಾಯ’, ‘ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿಗೊಳಿಸಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
‘ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಆಗಸ್ಟ್ 15ರೊಳಗೆ ಒಳ ಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ, ಸಮುದಾಯದಿಂದ ರಾಜ್ಯವ್ಯಾಪಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
‘ರಾಜ್ಯದಲ್ಲಿರುವ ಮಾದಾರ, ಸಮಗಾರ, ಡೋಹರ, ಮಚಗಾರ ಸಮುದಾಯದವರು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇಂಥ ಸಮುದಾಯದವರಿಗೆ ಪರಿಶಿಷ್ಟ ಜಾತಿಯ ಶೇ 15ರಷ್ಟಿರುವ ಮೀಸಲಾತಿಯಲ್ಲಿ ಶೇ 6ರಷ್ಟು (ಎಡಗೈ ಸಮಾಜಕ್ಕೆ) ಒಳ ಮೀಸಲಾತಿ ನೀಡುವಂತೆ ಸದಾಶಿವ ಆಯೋಗ ಈಗಾಗಲೇ ಶಿಫಾರಸು ಮಾಡಿದೆ’ ಎಂದರು.
‘ಈ ಶಿಫಾರಸು ಜಾರಿಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೇಟು ಹಾಕುತ್ತಿದೆ. ಸುಪ್ರೀಂಕೋರ್ಟ್ ನೀಡಿದ ಆದೇಶವನ್ನೂ ಪಾಲನೆ ಮಾಡದೇ ನ್ಯಾಯಾಂಗ ನಿಂದನೆ ಮಾಡುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಸಮುದಾಯದ ಮಕ್ಕಳು, ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಬ್ಯಾಕ್‌ಲಾಗ್ ಹುದ್ದೆಗಳು ಸಹ ಸಿಗುತ್ತಿಲ್ಲ. ಒಳ ಮೀಸಲಾತಿ ಜಾರಿಯಾದರೆ, ಪ್ರತಿಯೊಬ್ಬರಿಗೂ ಮೀಸಲಾತಿಯಡಿ ಉದ್ಯೋಗ ಸಿಗಲಿದೆ. ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ತೀರಾ ಅಗತ್ಯವಿದ್ದು, ಇದಕ್ಕಾಗಿ 40 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ’ ಎಂದು ಹೇಳಿದರು.
‘ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಒಳ ಮೀಸಲಾತಿ ಜಾರಿಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಅದರ ನಿರ್ಧಾರದಿಂದ ಒಳ ಮೀಸಲಾತಿ ಜಾರಿಯಾಗಬಹುದೆಂಬ ಖುಷಿಯಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ಒಲವು ತೋರಿಸುತ್ತಿಲ್ಲ. ಆಯೋಗ ಹಾಗೂ ಸಮೀಕ್ಷೆ ಹೆಸರಿನಲ್ಲಿ ಒಂದು ವರ್ಷದಿಂದ ಕಾಲಹರಣ ಮಾಡುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.
‘ಕಾಂಗ್ರೆಸ್ ಸರ್ಕಾರದಲ್ಲಿರುವ ಕೆಲವರು, ಸಿದ್ದರಾಮಯ್ಯ ಅವರ ಕಿವಿ ಚುಚ್ಚುತ್ತಿದ್ದಾರೆ. ಇಂಥ ಚಾಡಿ ಹೇಳುವ ಜನರಿಂದ ಸಿದ್ದರಾಮಯ್ಯ ಅವರು ಅಂತರ ಕಾಯ್ದುಕೊಳ್ಳಬೇಕು. ತ್ವರಿತವಾಗಿ ಒಳ ಮೀಸಲಾತಿ ಜಾರಿ ಮಾಡುವ ಮೂಲಕ, ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಒತ್ತಾಯಿಸಿದರು.
‘ಸಮುದಾಯದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 10 ಸಾವಿರದಿಂದ 30 ಸಾವಿರದವರೆಗೂ ಸಮಾಜದ ಮತದಾರರಿದ್ದಾರೆ. ಆಗಸ್ಟ್ 15ರೊಳಗೆ ಬೇಡಿಕೆ ಈಡೇರಿಸದಿದ್ದರೆ, ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಗುಡುಗಿದರು.
ಶೇ 6ರಷ್ಟು ಒಳ ಮೀಸಲಾತಿಗೆ ಆಗ್ರಹ ಘೋಷಣಾ ಫಲಕ ಪ್ರದರ್ಶನ ಆಗಸ್ಟ್ 15ರ ಗಡುವು
ಪರಿಶಿಷ್ಟ ಜಾತಿಯಲ್ಲಿ ಅತಿ ಹಿಂದುಳಿದ ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕುಗವಿಸಿದ್ದಪ್ಪ ದ್ಯಾಮಣ್ಣನವರ ಮುಖಂಡ
ಹರಿಯಾಣ ತೆಲಂಗಾಣ ಆಂಧ್ರಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ರಾಜ್ಯ ಸರ್ಕಾರ ಕುಂಟು ನೆಪ ಹೇಳಬಾರದುಪರಮೇಶ್ವರಪ್ಪ ಮೇಗಳಮನಿ ಮುಖಂಡ
ಒಳ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ. ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆಡಿ.ಎಸ್. ಮಾಳಗಿ ಮುಖಂಡ
‘ಸರ್ಕಾರದ ವಿರುದ್ಧ ಸಾಮೂಹಿಕ ಹೋರಾಟ’ ‘ರಾಜ್ಯ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮಗೂ ತಾಳ್ಮೆಯಿದ್ದು ಅದನ್ನು ಸರ್ಕಾರ ಪರೀಕ್ಷಿಸುತ್ತಿದೆ. ಆಗಸ್ಟ್ 15ರೊಳಗಾಗಿ ಒಳ ಮೀಸಲಾತಿ ಜಾರಿಗೊಳಿಸಲು ಗಡುವು ಕೊಡುತ್ತಿದ್ದೇವೆ. ಕ್ರಮ ವಹಿಸದಿದ್ದರೆ ವಿದ್ಯಾರ್ಥಿಗಳು ವಕೀಲರು ಕಾರ್ಮಿಕರು ಮಹಿಳೆಯರು ಪೌರ ಕಾರ್ಮಿಕರು ಸಂಘಟನೆಗಳ ನೇತೃತ್ವದಲ್ಲಿ ಸಾಮೂಹಿಕ ಹೋರಾಟ ಆರಂಭಿಸಲಾಗುವುದು’ ಎಂದು ಮುಖಂಡರಾದ ಉಡಚಪ್ಪ ಮಾಳಗಿ ಹಾಗೂ ನಾಗರಾಜ ಮಾಳಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.