ADVERTISEMENT

ಹಾವೇರಿ | ಮಕ್ಕಳಿಂದ ಮೊಬೈಲ್ ಬಳಕೆ: ಎಚ್ಚರಿಕೆ ವಹಿಸಲು ಕಿವಿಮಾತು

ಪಾಲಕರ ಜೊತೆ ವಿಡಿಯೊ ಕಾನ್ಫರೆನ್ಸ್ * ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:21 IST
Last Updated 10 ಆಗಸ್ಟ್ 2024, 16:21 IST
ಹಾವೇರಿ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಪಾಲಕರ ಜೊತೆ ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಸಭೆ ನಡೆಸಿದರು
ಹಾವೇರಿ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಪಾಲಕರ ಜೊತೆ ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಸಭೆ ನಡೆಸಿದರು   

ಹಾವೇರಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಫಲಿತಾಂಶ ಸುಧಾರಣೆಗೆ ಹಲವು ಕ್ರಮ ಕೈಗೊಂಡಿರುವ ಜಿಲ್ಲಾಡಳಿತದ ಅಧಿಕಾರಿಗಳು, ಇದೇ ಮೊದಲ ಬಾರಿಗೆ ಪಾಲಕರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಸಭೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿರುವ ವಿಡಿಯೊ ಕಾನ್ಫರೆನ್ಸ್ ಕೊಠಡಿಯಲ್ಲಿ ಹಾಜರಿದ್ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ್ ಶ್ರೀಧರ್ ಹಾಗೂ ಅಧಿಕಾರಿಗಳು, ಜಿಲ್ಲೆಯ 368 ಶಾಲೆ ಹಾಗೂ ಕಾಲೇಜುಗಳ ಪಾಲಕರ ಜೊತೆ ಸಮಾಲೋಚಿಸಿದರು.

ಅಕ್ಷಯ್ ಶ್ರೀಧರ್ ಮಾತನಾಡಿ, ‘ಜಿಲ್ಲೆಯು ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಲು ಈ ವರ್ಷ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಜೊತೆ ಪೋಷಕರ ಪಾತ್ರವು ಮಹತ್ವದ್ದಾಗಿದೆ’ ಎಂದರು.

ADVERTISEMENT

‘ಇಂದಿನ ಬಹುತೇಕ ಮಕ್ಕಳು ಮೊಬೈಲ್ ಹೆಚ್ಚು ಬಳಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಕೆಲ ಮಕ್ಕಳು, ವಯಸ್ಸಿಗೆ ತಕ್ಕದ್ದಲ್ಲದ ವಿಡಿಯೊ ನೋಡುತ್ತಿದ್ದಾರೆ. ಇಂಥ ಮಕ್ಕಳ ಚಲನಚಲನಗಳ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕು. ಮಕ್ಕಳು ದಾರಿ ತಪ್ಪದಂತೆ ನೋಡಿಕೊಂಡು, ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 22ನೇ ಸ್ಥಾನದಲ್ಲಿದ್ದ ಹಾವೇರಿ, ಪ್ರಸಕ್ತ ವರ್ಷ 15ನೇ ಸ್ಥಾನಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಅತಿ ಹೆಚ್ಚು ಮಕ್ಕಳು ಉತ್ತೀರ್ಣರಾಗಬೇಕು. ಇದರ ಜೊತೆಯಲ್ಲಿ ರ‍್ಯಾಂಕ್‌ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಬೇಕು’ ಎಂದರು.

‘ಶಾಲೆ ಅವಧಿ ಹೊರತುಪಡಿಸಿ, ಸಂಜೆ ಸಮಯದಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. 10ರಿಂದ 15 ಮಕ್ಕಳಿಗೊಬ್ಬರಂತೆ ಶಿಕ್ಷಕರನ್ನು ನಿಯೋಜಿಸಿ, ಮಕ್ಕಳ ಫಲಿತಾಂಶ ಸುಧಾರಣೆ ಜವಾಬ್ದಾರಿ ವಹಿಸಲಾಗಿದೆ. ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು, ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಪಾಲಕರ ಸಭೆ ನಡೆಸಲಾಗುವುದು. ಮಕ್ಕಳ ಪ್ರಗತಿ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ‘ಮೊದಲ ಬಾರಿಗೆ ಪಾಲಕರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ಆಯೋಜಿಸಲಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಕರ ಜೊತೆ ಪಾಲಕರು ಸಹಕರಿಸಬೇಕು’ ಎಂದರು.

ವಿಶೇಷ ಆಹ್ವಾನಿತರಾಗಿದ್ದ ಗುರುರಾಜ ಪಾಟೀಲ, ‘ಮಕ್ಕಳು ಶಾಲೆಯ ತರಗತಿಗಳನ್ನು ತಪ್ಪಿಸಬಾರದು. ಶೇ 100ರಷ್ಟು ಹಾಜರಾತಿ ಇರಬೇಕು. ಅವಾಗಲೇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ’ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ ಎಚ್., ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಂಶುಪಾಲ ಗಿರೀಶ ಪದಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.