ADVERTISEMENT

ಹಾವೇರಿ| ಎನ್‌.ಕೆ.ಪಾಟೀಲ್‌ ಸಮಿತಿ ವರದಿ ಜಾರಿಯಾಗಲಿ

ಸಾಮಾಜಿಕ ಪರಿವರ್ತನಾ ಜನಾಂದೋಲನದ ಎಸ್‌.ಡಿ.ಬಳಿಗಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:20 IST
Last Updated 24 ಜನವರಿ 2020, 14:20 IST

ಹಾವೇರಿ: ಅಪೌಷ್ಟಿಕತೆ ಮುಕ್ತ ರಾಜ್ಯಕ್ಕಾಗಿ ಮತ್ತು ಅಂಗನವಾಡಿಗಳ ಸಬಲೀಕರಣಕ್ಕಾಗಿ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ್‌ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಡಿ.ಬಳಿಗಾರ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಹಾರಾಷ್ಟ್ರ, ಬಿಹಾರ, ಅಸ್ಸಾಂಗಳಿವೆ. ನಾಲ್ಕನೇ ಸ್ಥಾನದಲ್ಲಿನಮ್ಮ ರಾಜ್ಯವಿದೆ. ರಾಜ್ಯ ಸರ್ಕಾರ ಈ ಗಂಭೀರ ಪರಿಸ್ಥಿತಿಯನ್ನು ಮರೆಮಾಚಲು ಸುಳ್ಳು ಅಂಕಿ ಸಂಖ್ಯೆಗಳನ್ನು ಮುಂದಿಟ್ಟು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ನವೆಂಬರ್‌ 2019ರಲ್ಲಿ 11,265 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂದರು.

ಸಮಿತಿಯ ಜಿಲ್ಲಾ ಸಂಚಾಲಕಿಹಸೀನಾ ಹೆಡಿಯಾಲ ಮಾತನಾಡಿ, ‘ಮಕ್ಕಳ ಅಪೌಷ್ಟಿಕತೆಯನ್ನು ನಿಖರವಾಗಿ ಗುರುತಿಸಲು ಅಗತ್ಯವಿರುವ ಡಿಜಿಟಲ್‌ ತೂಕದ ಯಂತ್ರಗಳನ್ನು ಅಂಗನವಾಡಿಗಳಿಗೆ ಒದಗಿಸಿಲ್ಲ. ನಾಲ್ಕು ದಿನ ಅನ್ನ–ಸಾಂಬಾರ್‌, ಒಂದು ದಿನ ಸಿಹಿಪೊಂಗಲ್‌, ಮತ್ತೊಂದು ದಿನ ಖಾರದ ಪೊಂಗಲ್‌ ಕೊಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಸರ್ಮಪಕವಾಗಿ ಆಗುವುದಿಲ್ಲ. ತೀವ್ರ ಅಪೌಷ್ಟಿಕ ಮಕ್ಕಳಿರುವ ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್‌ ನೀಡುತ್ತಿಲ್ಲ ಎಂದು ದೂರಿದರು.

ADVERTISEMENT

ಅಂಗನವಾಡಿಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಶೇ 45ರಷ್ಟು ಅಂಗವನಾಡಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯವಿಲ್ಲದಿರುವುದರಿಂದ ಮಕ್ಕಳು, ಬೀದಿಬದಿಯಲ್ಲಿ, ರಸ್ತೆಗಳಲ್ಲಿ ಶೌಚಕ್ಕೆ ಹೋಗುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಪೌಷ್ಟಿಕ ಮಕ್ಕಳನ್ನು ಸಾವಿನ ದವಡೆಯಿಂದ ರಕ್ಷಿಸುವಲ್ಲಿ ಸಂಜೀವಿನಿಯಾಗಬೇಕಾಗಿದ್ದ ಈ ಕೇಂದ್ರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಯಿಂದ ಅತಂತ್ರ ಸ್ಥಿತಿಯಲ್ಲಿವೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹನುಮವ್ವ ಪಾಟೀಲ, ಕಮಲವ್ವ ಲಮಾಣಿ, ಭರಮಪ್ಪ ಪೂಜಾರ, ಶಂಕರ ಲಮಾಣಿ, ರಾಮಣ್ಣ ಬಾದಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.