
ಹಾವೇರಿ: ‘ಇಂದು ಮನೆಗಳಲ್ಲಿ ಭೌತಿಕ ಸಂಪತ್ತು ತುಂಬಿದೆ. ಆದರೆ, ಜನರ ಹೃದಯದಲ್ಲಿ ಮಾತ್ರ ಆಧ್ಯಾತ್ಮಿಕ ಸಂಪತ್ತು ಖಾಲಿಯಾಗಿದೆ. ಮಾನವೀಯ ಮೌಲ್ಯಗಳ ಸಮೇತ ಆಧ್ಯಾತ್ಮಿಕ ಸಂಪತ್ತು ಗಳಿಸುವ ಮೂಲಕ ಜನರು ಹೃದಯದಿಂದ ಶ್ರೀಮಂತರಾಗಬೇಕಿದೆ’ ಎಂದು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ‘ಅಧ್ಯಾತ್ಮ ಪ್ರವಚನ’ ಕಾರ್ಯಕ್ರಮದಲ್ಲಿ ಶನಿವಾರ ಅವರು ಪ್ರವಚನ ನೀಡಿದರು.
‘ಹಸಿವಾದಾಗ ಊಟ ಮಾಡುವುದು ಸಂಸ್ಕೃತಿ. ಹಸಿವು ಇಲ್ಲದಾಗಲೂ ಊಟ ಮಾಡುವುದು ವಿಕೃತಿ. ಮತ್ತೊಬ್ಬರ ಅನ್ನ ಕಸಿದುಕೊಂಡು ಊಟ ಮಾಡುವುದು ದಬ್ಬಾಳಿಕೆ. ತಾನು ಉಪವಾಸ ಇದ್ದು, ಮತ್ತೊಬ್ಬರಿಗೆ ಉಣ ಬಡಿಸುವುದು ಭವ್ಯತೆ. ಮನಸ್ಸನ್ನು ನಿಗ್ರಹಿಸಿದವನು ಸಾಧು, ನಿರ್ಲಿಪ್ತನಾದವನು ಸನ್ಯಾಸಿ, ಸತ್ಯವನ್ನೇ ನುಡಿಯುವವನು ಅನುಭಾವಿ, ಜೀವನವನ್ನು ದೇವರಿಗೆ ಅರ್ಪಿಸಿದವನು ಶರಣ. ಈ ಎಲ್ಲ ಗುಣಗಳನ್ನು ಅರಿಯುವವನು ಭಕ್ತ. ಅಂತರಂಗದಲ್ಲಿ ಪ್ರಜ್ಞೆ, ಹೃದಯದಲ್ಲಿ ದೈವತ್ತ ಹೊಂದಿದವನು ನಿಜ ಶಿವಶರಣನಾಗುತ್ತಾನೆ’ ಎಂದರು.
‘12ನೇ ಶತಮಾನದ ಶಿವಶರಣರು ಹಾಗೂ ಸಂತ ಮಹಾತ್ಮರಲ್ಲಿ ಭೌತಿಕ ಸಂಪತ್ತಿಗಿಂತ ಹೃದಯ ಸಂಪತ್ತು ಹೆಚ್ಚಾಗಿತ್ತು. ಮನುಷ್ಯ ಬಾಲ್ಯದಲ್ಲಿ ಹಣ್ಣಿಗಾಗಿ, ಯೌವನದಲ್ಲಿ ಹೆಣ್ಣು–ಹೊನ್ನಿಗಾಗಿ ಹಾತೊರೆಯುತ್ತಾನೆ. ಮುಪ್ಪಿನಲ್ಲಿ ಮಣ್ಣು ಕರೆಯುತ್ತದೆ ಎಂಬುದನ್ನು ಮರೆತಿರುತ್ತಾನೆ. ಅಫ್ಘಾನಿಸ್ತಾನದಿಂದ ಬಂದ ಭೂಪಾಲ ರಾಜ ತನ್ನ ಐಶ್ವರ್ಯವನ್ನು ಬಿಟ್ಟು ಕಲ್ಯಾಣಕ್ಕೆ ಬಂದು ಮೋಳಿಗೆ ಮಾರಯ್ಯನಾಗಿ ಶರಣನಾಗುತ್ತಾನೆ. ಆತ ಭೌತಿಕ ಸಂಪತ್ತನ್ನು ಬಿಟ್ಟು ಆಧ್ಯಾತ್ಮದ ಸಂಪತ್ತನ್ನು ಅರಿಸಿ ಬಂದನು. ಅಂತರಂಗದಲ್ಲಿ ಪ್ರಜ್ಞೆಯನ್ನು ಉತ್ತಮವಾಗಿಟ್ಟುಕೊಂಡವನು ಎಲ್ಲರಲ್ಲಿಯೂ ಮತ್ತು ಎಲ್ಲಾ ವಸ್ತುಗಳಲ್ಲಿಯೂ ಸುಂದರತೆಯನ್ನೇ ಕಾಣುತ್ತಾನೆ. ಪ್ರೀತಿ, ವಿಶ್ವಾಸ, ಕರುಣೆ, ಅನುಕಂಪ, ಸಹಕಾರ, ಸಹಬಾಳ್ವೆ, ಭಕ್ತಿ, ನಂಬಿಕೆ, ಶ್ರದ್ಧೆ, ಮಾನವೀಯತೆ ಇದ್ದಲ್ಲಿ ಹೃದಯ ಶ್ರೀಮಂತಿಕೆಯೂ ಇರುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.