ADVERTISEMENT

ಶಿಗ್ಗಾವಿ |ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮ ಇಂದು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:28 IST
Last Updated 13 ಸೆಪ್ಟೆಂಬರ್ 2025, 6:28 IST
ಶಿಗ್ಗಾವಿ ಪಟ್ಟಣದಲ್ಲಿರುವ ಅರ್ಬನ್ ಕೋ–ಆಪ್ ಬ್ಯಾಂಕ್ ಕಟ್ಟಡ 
ಶಿಗ್ಗಾವಿ ಪಟ್ಟಣದಲ್ಲಿರುವ ಅರ್ಬನ್ ಕೋ–ಆಪ್ ಬ್ಯಾಂಕ್ ಕಟ್ಟಡ    

ಶಿಗ್ಗಾವಿ: ಇಲ್ಲಿಯ ಶಿಗ್ಗಾವಿ ಅರ್ಬನ್ ಕೋ–ಆಪ್ ಬ್ಯಾಂಕ್‌ ರಜತ ಸಂಭ್ರಮದಲ್ಲಿದ್ದು, ಇದರ ನಿಮಿತ್ತ ಕಟ್ಟಡದ ನವೀಕೃತ  ಒಳಾಂಗಣ ಮತ್ತು ಮೊದಲ ಮಹಡಿಯ ಉದ್ಘಾಟನಾ ಸಮಾರಂಭ ಸೆ. 13ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಬ್ಯಾಂಕ್‌ನ ಸಭಾಂಗಣದಲ್ಲಿ ಸಮಾರಂಭ ಜರುಗಲಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಂಕಾಪುರ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಂಜೀಗಟ್ಟಿ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಸಂಗನಬಸವ ಸ್ವಾಮೀಜಿ,  ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.

ಬ್ಯಾಂಕ್‌ನ ಅಧ್ಯಕ್ಷ ಜಗದೀಶ ತೊಂಡಿಹಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥಾಪಕ ಅಧ್ಯಕ್ಷ ಪ್ರಭುಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಸೇರಿದಂತೆ ಸಾಹಿತಿಗಳು, ಉಪನ್ಯಾಸಕರು, ವಿವಿಧ ಸಹಕಾರಿ ಮುಖಂಡರು, ವಿವಿಧ ಬ್ಯಾಂಕಗಳ ಆಡಳಿತ ಮಂಡಳಿ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಇದೇ 15ರಂದು ಬ್ಯಾಂಕ್‌ನ ರಜತ ಮಹೋತ್ಸವ ಸಮಾರಂಭವನ್ನೂ ಅದ್ಧೂರಿಯಾಗಿ ಆಚರಿಸಲು ಬ್ಯಾಂಕ್‌ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯಮ ಮತ್ತು ಕಾನೂನುಗಳಿಗೆ ಒಳಪಟ್ಟು 1997ರಲ್ಲಿ ಶಿಗ್ಗಾವಿ ಅರ್ಬನ್ ಕೋ-ಆಪ್ ಬ್ಯಾಂಕ್ ಅಧಿಕೃತವಾಗಿ ತನ್ನ ಕಾರ್ಯಗಳನ್ನು ಪ್ರಾರಂಭಿಸಿತು. ಅಂದು 1,051 ಸದಸ್ಯರಿಂದ ₹ 7.29 ಲಕ್ಷ ಬಂಡವಾಳ ಹಾಗೂ ₹ 67.95 ಲಕ್ಷ ಠೇವಣಿಯೊಂದಿಗೆ ವಹಿವಾಟು ಶುರು ಮಾಡಲಾಗಿತ್ತು. ಬ್ಯಾಂಕ್ ತನ್ನ ಸದಸ್ಯರ, ಗ್ರಾಹಕರ ಹಾಗೂ ಬೆಂಬಲಿತ ಅಭಿಮಾನಿಗಳ ಸಹಕಾರದೊಂದಿಗೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ’ ಬ್ಯಾಂಕ್ ಅಧ್ಯಕ್ಷ ಜಗದೀಶ ತೊಂಡಿಹಾಳ ತಿಳಿಸಿದರು.

‘ನಮ್ಮ ಬ್ಯಾಂಕ್, ನಗರದಲ್ಲಿ ಜನರ ಮೆಚ್ಚುಗೆ ಗಳಿಸಿ ಬೆಳೆಯುತ್ತಿದೆ. ಬ್ಯಾಂಕ್‌ ಸ್ಥಾಪನೆಯಾಗಿ 25 ವರ್ಷ ‍ಪೂರೈಸಿ, ಮುನ್ನಡೆ ಸಾಧಿಸುತ್ತಿದೆ. ಅಂದು ಸಣ್ಣ ಉಳಿತಾಯದಿಂದ ಆರಂಭವಾದ ಈ ಬ್ಯಾಂಕ್, ಇಂದು ಜನರ ವಿಶ್ವಾಸದೊಂದಿಗೆ ಬೆಳೆಯುತ್ತಿದೆ. ಸಂಸ್ಥಾಪಕ ನಿರ್ದೇಶಕರ ಪರಿಶ್ರಮದ ಫಲ ಇದಾಗಿದೆ’ ಎಂದು ಹೇಳಿದರು.

‘ಜನತಾ ಬಜಾರ, ಗೃಹ ನಿರ್ಮಾಣ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮಾತ್ರ ಇದ್ದವು. ಜನತೆಗೆ ವ್ಯಾಪಾರ-ವ್ಯವಹಾರಕ್ಕೆ ಒತ್ತು ನೀಡುವ ಸಂಘಗಳು ಇರಲಿಲ್ಲ. ಬಡ್ಡಿ ಆಸೆಗಾಗಿ ಸಾಲ ನೀಡುವ ಫೈನಾನ್ಸ್ ಕಂಪನಿಗಳು ಹೆಚ್ಚಾಗಿದ್ದ ಕಾಲದಲ್ಲಿಯೇ ಹಿರಿಯ ಮುಖಂಡರಾದ ದಿವಂಗತ ಚಂದ್ರಣ್ಣ ಯಲಿಗಾರ, ಹನುಮಂತಗೌಡ್ರ ದುಂಡಿಗೌಡ್ರ, ಪ್ರಭುಗೌಡ್ರ ಪಾಟೀಲ, ಜನಾರ್ದನ ಬ್ರಹ್ಮಾವರ, ವೀರಭದ್ರಗೌಡ್ರ ಹೊಸಗೌಡ್ರ ಹಾಗೂ ಇತರರು ಸೇರಿ ಈ ಬ್ಯಾಂಕ್ ಸ್ಥಾಪಿಸಿದರು. ಬಾಡಿಗೆ ಕಟ್ಟಡದಲ್ಲಿದ್ದ ಬ್ಯಾಂಕ್, ಇಂದು ಸ್ವಂತ ಕಟ್ಟಡ ಹೊಂದಿದೆ. ಮುಂದಿನ ದಿನಗಳಲ್ಲಿಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶ ನಮ್ಮದಾಗಿದೆ’ ಎಂದು ತಿಳಿಸಿದರು.

ಜಗದೀಶ ತೊಂಡಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.