ADVERTISEMENT

ಹಾವೇರಿ: ಮುರುಘಾ ಶರಣರಿಂದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ

ಭಾವನೆ, ಆಲೋಚನೆ ಪರಿಶುದ್ಧಗೊಳಿಸುವುದೇ ಶಿವಯೋಗ: ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 5:30 IST
Last Updated 27 ಡಿಸೆಂಬರ್ 2021, 5:30 IST
ಮುರುಘಾ ಶರಣರಿಂದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ
ಮುರುಘಾ ಶರಣರಿಂದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ   

ಹಾವೇರಿ: ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗದ ಖಾಸಾಮಠವಾದ ನಗರದ ಹೊಸಮಠದಲ್ಲಿ ಸೋಮವಾರ ಶಿವಮೂರ್ತಿ ಮುರುಘಾ ಶರಣರು "ಸಹಜ ಶಿವಯೋಗ" ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಲಿಂ.ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘಾ ರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವ ನಿಮಿತ್ತ "ಶರಣ ಸಂಸ್ಕೃತಿ ಉತ್ಸವ 2021" ಅಂಗವಾಗಿ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಶಿವಯೋಗ ಆಸಕ್ತರು ಪಾಲ್ಗೊಂಡು "ಸಹಜ ಶಿವಯೋಗ" ಆಚರಿಸಿದರು.

ADVERTISEMENT

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಭಾವನೆ, ಆಲೋಚನೆಗಳನ್ನು ಪರಿಶುದ್ಧಗೊಳಿಸುವುದೇ ಶಿವಯೋಗ. ನಿಮ್ಮ ಬದುಕಿನ ಶಿಲ್ಪಿಗಳು ನೀವೇ. ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಅದನ್ನು ಬದುಕಿನಲ್ಲಿ ಆಚರಿಸಿಕೊಂಡು ಭವ್ಯ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಜಗತ್ತಿನಲ್ಲಿ ಕದಿಯಲಾರದವರು ಯಾರೂ ಇಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲರೂ ಕದಿಯುತ್ತಾರೆ. ಕಳ್ಳತನ ಎಂಬುದು ಮಹಾ ಅಪರಾಧ. ಹೀಗಾಗಿಯೇ ಬಸವಣ್ಣನವರು ಕಳಬೇಡ, ಕೊಲಬೇಡ ಎಂದು ವಚನದಲ್ಲಿ ಸಂದೇಶ ನೀಡಿದರು. ಕದಿಯಲಾರದ ಆಭರಣಗಳೆಂದರೆ ವಿಭೂತಿ ಮತ್ತು ರುದ್ರಾಕ್ಷಿ ಎಂದರು.

ಅಂತರಾಳ ಚೆನ್ನಾಗಿಟ್ಟುಕೊಳ್ಳಲು ಧ್ಯಾನ ಮಾಡಿ. ತೋರಿಕೆಗಾಗಿ, ಸಂಪ್ರದಾಯಕ್ಕಾಗಿ ಧ್ಯಾನ ಮಾಡುವುದರಿಂದ ಪ್ರತಿಫಲ ಸಿಗುವುದಿಲ್ಲ. ಪರಿವರ್ತನೆಗಾಗಿ ಶಿವಯೋಗ ಆಚರಿಸಿ ಎಂದು ತಿಳಿ ಹೇಳಿದರು.

ಹಣದ ಲೆಕ್ಕಾಚಾರ, ಗುಣಾಕಾರವೇ ಬದುಕಲ್ಲ. ಭವ್ಯ ಬದುಕನ್ನು ರೂಪಿಸಿಕೊಳ್ಳಲು ಬೌದ್ಧಿಕ ತಾಲೀಮು ಅಗತ್ಯ. ತಪ್ಪುಗಳ ಪರಿಷ್ಕಾರ, ಆಲೋಚನೆಗಳ ಆವಿಷ್ಕಾರವೇ ಶಿವಯೋಗ ಎಂದರು.

ಎಲ್ಲರೂ ಏಕದೇವೋಪಾಸನೆ ಮಾಡಿ, ಇಷ್ಟಲಿಂಗ ಪೂಜೆ ಮಾಡಿ, ಹಣಕ್ಕಿಂತ ಆಸ್ತಿಗಿಂತ ಗುರುಗಳ ಆಶೀರ್ವಾದ ಶ್ರೇಷ್ಠವಾದುದು ಎಂದರು.

ಗೋಣಿಕೊಪ್ಪ ಶಿವಾನಂದಮಠದ ಮಹಾಂತ ಸ್ವಾಮೀಜಿ, ರಾಣೆಬೆನ್ನೂರು ವಿರಕ್ತಮಠದ ಗುರುಬಸವ ಸ್ವಾಮೀಜಿ, ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹಾಗೂ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.