ADVERTISEMENT

ಸಜ್ಜನರ ಶಾಸಕ ಆದರೆ ಕ್ಷೇತ್ರ ಉಳಿತದಾ?: ಸಿದ್ದರಾಮಯ್ಯ ಪ್ರಶ್ನೆ

ಹಾನಗಲ್ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 15:35 IST
Last Updated 23 ಅಕ್ಟೋಬರ್ 2021, 15:35 IST
ಮಾರನಬೀಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ಮಾರನಬೀಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು   

ಅಕ್ಕಿಆಲೂರ: ‘ಶ್ರೀನಿವಾಸ ಮಾನೆ ಹಾನಗಲ್ ಕ್ಷೇತ್ರಕ್ಕೆ ಹೊಸಬರಲ್ಲ. ಸೋತರೂ ಮನೆ ಹಿಡಿದು ಕೂಡಲಿಲ್ಲ. ಜನಸ್ಪಂದನೆ ಮೂಲಕ ಮನೆ ಮಾತಾಗಿದ್ದಾರೆ. ಸಂಗೂರ ಶುಗರ್ ಫ್ಯಾಕ್ಟರಿ ಮುಳುಗಿಸಿದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಖಾಲಿ ಚೀಲವನ್ನೂ ಬಿಡದೇ ಮಾರಿಕೊಂಡ ಗಿರಾಕಿ. ಗೌರಾಪುರ ಗುಡ್ಡದಲ್ಲಿ 25 ಎಕರೆ ಮಂಜೂರು ಮಾಡಿಸಿಕೊಂಡಿದ್ದಾನೆ. ಬಡವರಿಗೆ, ಭೂಮಿ ಇಲ್ಲದವರಿಗೆ ಮಂಜೂರು ಮಾಡಿಸಿಕೊಡಬಹುದಿತ್ತು. ಸಜ್ಜನರ ಕಡುಬಡವನಾ? ಈತ ಶಾಸಕ ಆದರೆ ಕ್ಷೇತ್ರ ಉಳಿತದಾ? ಯಾವ ಕಾರಣಕ್ಕೂ ಈತ ಶಾಸಕ ಆಗಬಾರದು’ ಹೀಗೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಮಾರನಬೀಡ, ಉಪ್ಪಣಸಿ ಮತ್ತು ಕರಗುದರಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ಹಾನಗಲ್ ಅಭಿವೃದ್ಧಿ ಮಾಡಿಬಿಡತಾರಂತೆ. ಪಕ್ಕದಲ್ಲೇ ಇದ್ದಿಯಲ್ಲಪ್ಪಾ ಮಿಸ್ಟರ್ ಬಸವರಾಜ ಬೊಮ್ಮಾಯಿ ಇಷ್ಟು ದಿನ ಏನು ಮಾಡಿದೆ? ಯಾಕೆ ಅಭಿವೃದ್ಧಿ ಮಾಡಲಿಲ್ಲ. ಈಗ ನಿಮಗೆ ಅಭಿವೃದ್ಧಿ ನೆನಪಾಗಿದೆಯಾ’ ಎಂದು ಪ್ರಶ್ನಿಸಿದರು.

ADVERTISEMENT

‘ಶಿವಕುಮಾರ ಉದಾಸಿ ಮೂರು ಬಾರಿ ಎಂಪಿ ಆಗಿದ್ದಾರೆ. ಯಾವಾಗಾದರೂ ಬಂದು ನಿಮ್ಮ ಕಷ್ಟ ಏನು ಅಂತಾ ಕೇಳಿದ್ದಾರಾ? ರಾಜ್ಯ ಕಷ್ಟದಲ್ಲಿದ್ದಾಗ ಪಾರ್ಲಿಮೆಂಟ್‍ನಲ್ಲಿ ಬಾಯಿ ಬಿಟ್ಟಿದ್ದಾರಾ? ಇವರ ಮುಖ ಬಹಳ ಜನ ನೋಡೇ ಇಲ್ಲ. ಈಗ ಬಂದು ವೀರಾವೇಶದಲ್ಲಿ ಮಾತನಾಡುತ್ತಿದ್ದಾರೆ’ ಎಂದರು.

‘ಯಡಿಯೂರಪ್ಪ ಹೇಳತಿದ್ದಾರೆ; ಇನ್ನೂ 50 ವರ್ಷ ಕಾಂಗ್ರೆಸ್ ಅಧಿಕಾರಕ್ಕ ಬರಲ್ಲ ಅಂಥ. ಈ ಯಡಿಯೂರಪ್ಪ ಅವರನ್ನ ಹೆದರಿಸಿ ಬಿಟ್ಟಿದ್ದಾರೆ. ನಮ್ಮ ವಿರುದ್ಧ ಹೋದರೆ ಇಡಿ, ಇನ್‍ಕಂ ಟ್ಯಾಕ್ಸ್‌ನವ್ರನ್ನ ಬಿಟ್ಟು ತನಿಖೆ ಮಾಡಿಸ್ತೀವಿ ಎಂದಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಅಂಥವರನ್ನೇ ಇವರು ಬಿಟ್ಟಿಲ್ಲ. ಯಡಿಯೂರಪ್ಪ ಅವರನ್ನು ಬಿಡತಾರಾ? ಉಪಯೋಗಿಸಿ ಎಸೆಯೋದು ಬಿಜೆಪಿ ಸಂಸ್ಕೃತಿ. ಯಡಿಯೂರಪ್ಪ ಮೇಲೆ ತೂಗುಗತ್ತಿ ನೇತಾಡುತಿದೆ’ ಎಂದು ಹರಿಹಾಯ್ದರು.

ಕಬ್ಬಿನ ಬೆಲೆ ಬಿದ್ದು ಹೋಗಿದ್ದರಿಂದ ಬೆಳೆಗಾರರಿಗೆ ನಮ್ಮ ಸರ್ಕಾರ ಇದ್ದಾಗ ₹1,800 ಕೋಟಿ ಸಬ್ಸಿಡಿ ಕೊಟ್ವಿ. ರೈತರಿಗೆ ₹3 ಲಕ್ಷ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ವಿ. ಸೊಸೈಟಿ ಸಾಲ ಮನ್ನಾ ಮಾಡಿದ್ವಿ. ಯಡಿಯೂರಪ್ಪನವರಾಗಲಿ, ಬೊಮ್ಮಾಯಿಯಾಗಲಿ ಸಾಲ ಮನ್ನಾ ಮಾಡಿದ್ದಾರಾ?’ ಎಂದ ಸಿದ್ದರಾಮಯ್ಯ ಮತ ಕೇಳೋಕೆ ನಿಮಗೆ ನಾಚಿಕೆ ಆಗಲ್ವಾ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.