
ಗುತ್ತಲ: ಚಿತ್ರದುರ್ಗ ಜಿಲ್ಲೆಯ ಮಾರಗಟ್ಟದಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯ ಕಚೇರಿ ಶೀಘ್ರದಲ್ಲಿ ಹಾವೇರಿ ಜಿಲ್ಲೆಗೆ ಸ್ಥಳಾಂತರ ಮಾಡಲಾಗುವುದು ಎಂದು ವಿಜ್ಞಾನಿ ಡಾ.ಜಗಜ್ಯೋತಿ ಹೇಳಿದರು.
ಮಂಗಳವಾರ ಕೂರಗುಂದ ಮತ್ತು ಹಾವನೂರ ಗ್ರಾಮದಲ್ಲಿ ನಡೆದ ರೇಷ್ಮೆ ಕೃಷಿ ಕ್ಷೇತ್ರೋತ್ಸವ ಮತ್ತು ದ್ವಿತಳಿ ಬೆಳೆ ವಿಚಾರಗೋಷ್ಠಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆಯಲ್ಲಿ 3 ಸಾವಿರ ಜನ ರೇಷ್ಮೆ ಬೆಳೆಗಾರರು ಇದ್ದು, ಅದರಲ್ಲಿ ಹಾವೇರಿ ತಾಲ್ಲೂಕಿನಲ್ಲಿ 1400 ಜನ ರೈತರು ರೇಷ್ಮೆ ಬೆಳೆಗಾರರು ಇದ್ದಾರೆ. ರೈತರು ಹುಳು ತರುವ ಮುನ್ನ ಮತ್ತು ತಂದ ಮೇಲೆ ಹಲುವಾರು ನಿಯಮಗಳನ್ನು ಪಾಲಿಸಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.
ಹುಳು ತರುವ ಎರಡು ದಿನಗಳ ಮುನ್ನ ರೇಷ್ಮೆ ಮನೆಯನ್ನು ಸ್ವಚ್ಛವಾಗಿ ತೊಳೆಯಬೇಕು. ಹುಳುಗಳಿಗೆ ಸಮಯಕ್ಕೆ ಸರಿಯಾಗಿ ಸೊಪ್ಪು ಹಾಕಿದರೆ ಉತ್ತಮ ಇಳುವರಿ ಬರುತ್ತದೆ. ರೇಷ್ಮೆ ಬೆಳೆಗೆ ಬರುವ ರೋಗದ ಬಗ್ಗೆ ನಿಗಾ ವಹಿಸಿ ಅಧಿಕಾರಿಗಳಿಂದ ಸಲಹೆ ಪಡೆದು ಔಷಧಿ ಸಿಂಪಡಿಸಬೇಕು ಎಂದು ಹೇಳಿದರು.
ರೇಷ್ಮೆ ವಿಸ್ತರಣಾ ಅಧಿಕಾರಿ ಪರಶುರಾಮ ಗೋಣೆಮ್ಮನವರ ಮಾತನಾಡಿ, ಎಕರೆಗೆ 430 ಸಸಿ ನಾಟಿ ಮಾಡಬೇಕು. ಸಸಿಯಿಂದ ಸಸಿಗೆ ಮತ್ತು ಸಾಲಿನಿಂದ ಸಾಲಿಗೆ 6 ಅಡಿ ಅಂತರದಲ್ಲಿ ಬೇಸಾಯ ಮಾಡಬೇಕು. ಕಡಿಮೆ ಬಂಡವಾಳ ಹಾಕಿ ಜಾಸ್ತಿ ಲಾಭ ಪಡೆಯುವ ಉಪಾಯ ಮಾಡಿ ರೇಷ್ಮೆ ಮನೆಯಲ್ಲಿ 28 ಡಿಗ್ರಿ ತಾಪಮಾನ, ತೇವಾಂಶ, ಶುದ್ದ ಗಾಳಿ, ಉಷ್ಣಾಂಶ ಇರುವಂತೆ ಕಾಪಾಡಿಕೊಳ್ಳಬೇಕು. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹಾವೇರಿ ಜಿಲ್ಲೆಯ ರೈತರಿಗೆ ಹಿಂಸೆ ನೀಡುತ್ತಿದ್ದಾರೆ. ಗೂಡನ್ನು ಕಳ್ಳತನ ಮಾಡುತ್ತಾರೆ. ಸರ್ಕಾರ ಅಂತವರ ಮೇಲೆ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಳಿಗೂಡು ರೇಷ್ಮೆ ಬೆಳೆಯುವ ರೈತರು ಇದ್ದಾರೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿ ರೇಷ್ಮೆ ನಿರೀಕ್ಷಕ ರಾಘವೇಂದ್ರ ಜ್ಯೋತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಇಟಿಗುಡಿ, ರೈತರಾದ ಅಣ್ಣಪ್ಪ ಹಡಗಲಿ, ಮಹೇಶ ಕೆಂಗನಿಂಗಪ್ಪನವರ, ಬಸವರಾಜ ಗಾಮಣ್ಣನವರ, ಬೀರಪ್ಪ ಹಡಗಲಿ, ಕನ್ನಪ್ಪ ಬನ್ನಿಮಟ್ಟಿ, ಫಕ್ಕಿರಪ್ಪ ಗೊಣ್ಣಿ, ನೀಲಪ್ಪ ಮಟ್ಟಿ, ಸಿದ್ದಪ್ಪ ಮುನ್ನೆನಿ, ದಿಳ್ಳೆಪ್ಪ ಗುರುವಿನ, ಹನಮಪ್ಪ ಮಟ್ಟಿ, ಬೀರಪ್ಪ ಮುನ್ನೆನಿ ಸೇರಿದಂತೆ ಇನ್ನು ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.