ಹಾವೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯವ್ಯಾಪಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿಯಲ್ಲಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯ ಗಣತಿದಾರರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಆಯೋಗದ ನೇತೃತ್ವದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಲಾಗಿದೆ. ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರನ್ನೇ ಗಣತಿದಾರರಾಗಿ ನಿಯೋಜಿಸಿ, ಅವರನ್ನು ಮನೆ ಮನೆಗೆ ಕಳುಹಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. 3,777 ಶಿಕ್ಷಕರು ಗಣತಿದಾರರಾಗಿ ಕೆಲಸ ಮಾಡುತ್ತಿದ್ದು, ತಾಂತ್ರಿಕ ಸಮಸ್ಯೆಯ ನಡುವೆಯೂ ತಮಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 4.12 ಲಕ್ಷ ಮನೆಗಳಿದ್ದು, ಈ ಪೈಕಿ 74,284 ಮನೆಗಳ ಸಮೀಕ್ಷೆಯು ಶನಿವಾರದ ಅಂತ್ಯಕ್ಕೆ ಮುಕ್ತಾಯಗೊಂಡಿದೆ. ಶನಿವಾರ ಒಂದೇ ದಿನದಲ್ಲಿ 39,130 ಮನೆಗಳ ಸಮೀಕ್ಷೆ ನಡೆದಿರುವುದು ವಿಶೇಷವಾಗಿದೆ.
‘ರಾಜ್ಯದಲ್ಲಿ 1.43 ಕೋಟಿ ಮನೆಗಳನ್ನು ಸಮೀಕ್ಷೆಗಾಗಿ ಗುರುತಿಸಲಾಗಿದೆ. ಈ ಪೈಕಿ 12.83 ಲಕ್ಷ ಮನೆಗಳ ಸಮೀಕ್ಷೆ ಶನಿವಾರ ಅಂತ್ಯಗೊಂಡಿದೆ. ಸೆ. 22ರಿಂದ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಯ ಪ್ರಗತಿಯಲ್ಲಿ ಹಾವೇರಿ ಜಿಲ್ಲೆ ಮುಂದಿದೆ. ರಾಜ್ಯದ ಅಂಕಿ–ಅಂಶಕ್ಕೆ ಹೋಲಿಸಿದರೆ ಪ್ರಗತಿಯಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
‘ಜಿಲ್ಲೆಯಲ್ಲಿ 3777 ಬ್ಲಾಕ್‌ಗಳನ್ನು ರಚಿಸಿ, ಸಮೀಕ್ಷೆ ಆರಂಭಿಸಿದ್ದೇವೆ. ದಿನಕ್ಕೆ 33,276 ಮನೆಗಳ ಸಮೀಕ್ಷೆ ಮಾಡುವ ಗುರಿ ಇಟ್ಟುಕೊಂಡು, ಕೆಲಸ ಮಾಡುತ್ತಿದ್ದೇವೆ. ನಿಗದಿತ ಮನೆಗಳ ಪೈಕಿ ಶೇ 18ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ 16.49ರಷ್ಟು ಪ್ರಗತಿ ಸಾಧಿಸಿರುವ ಕೊಪ್ಪಳ ಎರಡನೇ ಸ್ಥಾನ ಹಾಗೂ ಶೇ 15.61ರಷ್ಟು ಪ್ರಗತಿ ಪಡೆದ ಗದಗ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಶೇ 1.27ರಷ್ಟು ಪ್ರಗತಿ ಸಾಧಿಸಿರುವ ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ’ ಎಂದು ಹೇಳಿದರು.
‘ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ರಟ್ಟೀಹಳ್ಳಿ, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲೂ ಉತ್ತಮ ಪ್ರಮಾಣದಲ್ಲಿ ಸಮೀಕ್ಷೆ ಆಗಿದೆ. ನಿಗದಿತ ದಿನದೊಳಗೆ ಸಮೀಕ್ಷೆ ಸಂಪೂರ್ಣವಾಗಿ ಮುಗಿಸುವ ವಿಶ್ವಾಸ ನಮಗಿದೆ’ ಎಂದು ತಿಳಿಸಿದರು.
ತಾಂತ್ರಿಕ ಸಮಸ್ಯೆಗೆ ಶಿಕ್ಷಕರು ಸುಸ್ತು: ಜಿಲ್ಲೆಯ ಬ್ಯಾಡಗಿ, ಶಿಗ್ಗಾವಿ, ಸವಣೂರು ಸೇರಿದಂತೆ ಹಲವು ಕಡೆಗಳಲ್ಲಿ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಲು ತಾಂತ್ರಿಕ ಸಮಸ್ಯೆ ಉಂಟಾಗುತ್ತಿರುವುದಾಗಿ ಶಿಕ್ಷಕರು ದೂರುತ್ತಿದ್ದಾರೆ. ಕೆಲ ಶಿಕ್ಷಕರು, ತಹಶೀಲ್ದಾರ್ ಅವರಿಗೂ ಮನವಿ ನೀಡಿದ್ದಾರೆ. ಈ ಸಮಸ್ಯೆ ನಡುವೆಯೇ ಕೆಲ ಶಿಕ್ಷಕರು, ತಮಗೆ ವಹಿಸಿರುವ ಮನೆಗಳ ಸಮೀಕ್ಷೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟು ಕೆಲಸ ಮಾಡುತ್ತಿದ್ದಾರೆ.
‘ಪ್ರಾಥಮಿಕ ಶಾಲೆಗಳ 3777 ಶಿಕ್ಷಕರು, ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದಿಂದಾಗಿ ರಾಜ್ಯದಲ್ಲಿಯೇ ಹಾವೇರಿ ಮೊದಲ ಸ್ಥಾನದಲ್ಲಿದೆ. ಸಮೀಕ್ಷೆ ಸಂದರ್ಭದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು, ತಾಂತ್ರಿಕ ತಂಡವೂ ಕೆಲಸ ಮಾಡುತ್ತಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.