ADVERTISEMENT

ಹೆಣ್ಣು ನೋಡಿ ಹೋಗಿದ್ದ ಯೋಧ ದೇವರಾಜ ಗೂಲಗಂದಿ

ಗುಂಡಿಗೆ ಬಲಿಯಾದ ಕಲಿವಾಳ ಗ್ರಾಮದ ಸೇನಾ ಕಾನ್‌ಸ್ಟೆಬಲ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 20:00 IST
Last Updated 23 ಅಕ್ಟೋಬರ್ 2018, 20:00 IST
   

ಸವಣೂರ:ತಾಲ್ಲೂಕಿನ ಕಲಿವಾಳ ಗ್ರಾಮದ ಸೇನಾ ಕಾನ್‌ಸ್ಟೆಬಲ್ ದೇವರಾಜ (ದೇವೇಂದ್ರಪ್ಪ) ಬಸವಂತಪ್ಪ ಗೂಲಗಂದಿ (31) ಮಂಗಳವಾರ ಬೆಳಿಗ್ಗೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯದ ವೇಳೆ ಗುಂಡಿಗೆ ಬಲಿಯಾಗಿದ್ದಾರೆ.

‘ರಜಾ ಮೇಲೆ ಊರಿಗೆ ಬಂದಿದ್ದ ಅವರು, ಭಾನುವಾರ ವಾಪಸಾಗಿದ್ದರು. ಸೋಮವಾರ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಮಂಗಳವಾರ ನಸುಕಿನ ಜಾವ ಸೈನ್ಯದಿಂದ ಕರೆ ಬಂದಿದ್ದು, ಗುಂಡು ತಗುಲಿದೆ ಎಂದು ತಿಳಿಸಿದರು. ಒಂದು ತಾಸಿನ ಬಳಿಕ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಿದರು’ ಎಂದು ಕಿರಿಯ ಸಹೋದರ, ಯೋಧ ಶ್ರೀಕಾಂತ ಗೂಲಗುಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ವರ್ಷ ಮದುವೆ ಕುರಿತು ಮನೆಯಲ್ಲಿ ನಿರ್ಧರಿಸಿದ್ದರು. ಹೀಗಾಗಿ, 20 ದಿನಗಳ ಹಿಂದೆ ರಜೆ ಮೇಲೆ ಬಂದಿದ್ದ ಅವರು, ಹೆಣ್ಣು ನೋಡಿ ಹೋಗಿದ್ದರು. ಮದುವೆ ನಿಶ್ಚಯಗೊಳ್ಳುತ್ತಿದ್ದರೆ, ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದರು’ ಎಂದು ಎನ್ನುವಾಗ ಕಣ್ಣಾಲಿಗಳು ತುಂಬಿ ಬಂದವು.ಮನೆಮಗನ ನಿಧನದಿಂದ ಮನೆಯಲ್ಲಿ ಶೋಕ ಮಡುಗಟ್ಟಿತ್ತು.

ADVERTISEMENT

‘ಸೋಮವಾರ ರಾತ್ರಿ ಮನೆ ಮಂದಿಯೊಂದಿಗೆ ಮಾತನಾಡಿದ್ದನು. ಆದರೆ, ಮಂಗಳವಾರ ಕೆಟ್ಟ ಸುದ್ದಿ ಬಂತು’ ಎಂದು ತಂದೆ ಬಸವಂತಪ್ಪ ಗೂಲಗಂದಿ ಹೇಳುವಾಗ ನೋವು ಕಟ್ಟೆಯೊಡೆದು ಬಂತು.

ಮೂವರೂ ಯೋಧರು
ಬಸವಂತಪ್ಪ ಗೂಲಗುಂದಿ ಮತ್ತು ಬಸವಣಮ್ಮೆ ಗೂಲಗುಂದಿ ದಂಪತಿಯ ಮೂವರು ಮಕ್ಕಳೂ (ಹನುಮಂತಪ್ಪ, ದೇವರಾಜ, ಶ್ರೀಕಾಂತ) ಸೈನ್ಯದಲ್ಲಿದ್ದಾರೆ. ಈ ಪೈಕಿ ದೇವರಾಜ ಭಾನುವಾರ ವಾಪಸ್‌ ಹೋಗಿದ್ದರೆ, ಗುಜರಾತ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಕಾಂತ ವಾರದ ಹಿಂದೆ ರಜೆ ಮೇಲೆ ಬಂದಿದ್ದರು. ಹಿರಿಯ ಸಹೋದರ ಹನುಮಂತಪ್ಪ ಜಮ್ಮುವಿನಲ್ಲಿದ್ದಾರೆ.

ದೇವರಾಜ, ಲಕ್ಷ್ಮೇಶ್ವರದಲ್ಲಿ ಪಿಯುಸಿ ಮುಗಿಸಿದ ಬಳಿಕ, 2010ರಲ್ಲಿ ಸೈನ್ಯಕ್ಕೆ ಸೇರಿದ್ದರು. ತಮಿಳುನಾಡು ಹಾಗೂ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ಹನುಮಂತಪ್ಪ 2000 ಹಾಗೂ ಶ್ರಿಕಾಂತ 2013ರಲ್ಲಿ ಸೈನ್ಯಕ್ಕೆ ಸೇರಿದ್ದಾರೆ.

ಸವಣೂರ ತಾಲ್ಲೂಕಿನ ಕಲಿವಾಳ ಗ್ರಾಮದಲ್ಲಿರುವ ಯೋಧನ ಮನೆ

ಕಲಿವಾಳದ ಕಲಿಗಳು
ತಾಲ್ಲೂಕಿನ ಕಲಿವಾಳ ಗ್ರಾಮದಲ್ಲಿ ಸುಮಾರು 450 ಮನೆಗಳಿವೆ. ಈ ಪೈಕಿ 120 ಮಂದಿ ಯೋಧರಿದ್ದಾರೆ. ಕೆಲವು ಮನೆಗಳಲ್ಲಿ ಮೂರರಿಂದ ನಾಲ್ವರೂ ಯೋಧರಾಗಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಿ.ಎಸ್. ಪ್ಯಾಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಚಿಕ್ಕಪ್ಪನನ್ನು ನೋಡಿ ದೊಡ್ಡಣ್ಣ, ಆತನನ್ನು ನೋಡಿ ದೇವರಾಜ, ಅವನನ್ನು ನೋಡಿ ನಾನು, ನನ್ನನ್ನು ನೋಡಿ ಊರಿನ ಇತರರು... ಹೀಗೆ ಸೈನ್ಯಕ್ಕೆ ಸೇರುವ ಹುಚ್ಚು ಕಲಿವಾಳದ ರಕ್ತದಲ್ಲಿಯೇ ಇದೆ. ಇಲ್ಲಿನ ನಾಲ್ಕು ವರ್ಷದ ಹುಡುಗನನ್ನು ಕೇಳಿದರೂ, ‘ನಾನು ಸೈನ್ಯಕ್ಕೆ ಸೇರುತ್ತೇನೆ’ ಎಂದೇ ಹೇಳುತ್ತಾರೆ ಎಂದು ಶ್ರೀಕಾಂತ ವಿವರಿಸಿದರು. ರಜೆಯಲ್ಲಿ ಬಂದಿದ್ದ ಗ್ರಾಮದ ಇತರ ಯೋಧರೂ ಅವರ ಜೊತೆಗಿದ್ದರು.

‘ಬುಧವಾರ ಮಧ್ಯಾಹ್ನ ವೀರಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಬರುವ ಸಾಧ್ಯತೆ ಇದೆ. ಸಕಲ ಗೌರವಗಳೊಂದಿಗೆ ಕುಟುಂಬದ ನಿರ್ಧಾರದಂತೆ ಅಂತ್ಯಕ್ರಿಯೆ ನಡೆಸಲಾಗುವುದು’ ಎಂದು ತಹಶೀಲ್ದಾರ್ ವಸಂತ ಸಜ್ಜನರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.