ಹಾವೇರಿ: ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಬಿಪಿಎಲ್ ಕುಟುಂಬದವರಿಗೆ ₹1 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಎಪಿಎಲ್ ಕುಟುಂಬಗಳನ್ನು ದೂರವಿಟ್ಟಿದ್ದು ಸರಿಯಲ್ಲ. ಈ ತಾರತಮ್ಯ ನಿವಾರಿಸಿ, ಎಪಿಎಲ್ ಮತ್ತು ಬಿಪಿಎಲ್ ಎರಡೂ ಕುಟುಂಗಳಿಗೂ ಪರಿಹಾರ ನೀಡಬೇಕು ಎಂದು ಜೆಡಿಎಸ್ ತಾಲ್ಲೂಕು ಘಟಕ ಬುಧವಾರ ಒತ್ತಾಯಿಸಿದೆ.
ಜೆಡಿಎಸ್ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ಸುಂಕದ ನೇತೃತ್ವದಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆ.ಎಂ.ಸುಂಕದ ಮಾತನಾಡಿ, ‘ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚಿನ ಮಂದಿ ಮೃತಪಟ್ಟಿದ್ದರೆ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ₹1 ಲಕ್ಷದ ಬದಲಾಗಿ ₹5 ಲಕ್ಷ ಪರಿಹಾರ ನೀಡಬೇಕು’ ಎಂದರು.
‘ಕೊರೊನಾ ಪೀಡಿತರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಕುಟುಂಬಸ್ಥರು ಸಹ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಚಿಕಿತ್ಸೆಗಾಗಿಮನೆ, ಬಂಗಾರ, ಆಸ್ತಿ-ಪಾಸ್ತಿ ಮಾರಿಕೊಂಡು ಸಾಲಕ್ಕೆ ಸಿಲುಕಿದ್ದಾರೆ. ಇಂಥ ಕುಟುಂಬಗಳಿಗೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ಚಿಕಿತ್ಸೆಯ ಶೇ 50ರಷ್ಟು ವೆಚ್ಚವನ್ನು ಭರಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.