ADVERTISEMENT

ಪ್ರಜಾಪ್ರಭುತ್ವ ಸಬಲೀಕರಣಕ್ಕಾಗಿ ಯಾತ್ರೆ

ಜನತಂತ್ರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್‌.ಹಿರೇಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 14:22 IST
Last Updated 25 ಫೆಬ್ರುವರಿ 2020, 14:22 IST
ಜನತಂತ್ರ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಶರಣ ಸಂತ ಸಂದೇಶ ಯಾತ್ರೆಯ ವಾಹನ ಮಂಗಳವಾರ ಹಾವೇರಿಗೆ ಬಂದ ಸಂದರ್ಭ ವಿದ್ಯಾರ್ಥಿನಿಯರು ಕುತೂಹಲದಿಂದ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ 
ಜನತಂತ್ರ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಶರಣ ಸಂತ ಸಂದೇಶ ಯಾತ್ರೆಯ ವಾಹನ ಮಂಗಳವಾರ ಹಾವೇರಿಗೆ ಬಂದ ಸಂದರ್ಭ ವಿದ್ಯಾರ್ಥಿನಿಯರು ಕುತೂಹಲದಿಂದ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ‘ದೇಶದಲ್ಲಿ ಧರ್ಮದ ಹೆಸರಿನಲ್ಲಿ ಅಧರ್ಮದ ವ್ಯಾಪಾರ ನಡೆಯುತ್ತಿದೆ. ಪ್ರೀತಿ, ಪ್ರೇಮದ ಸಂದೇಶ ಸಾರುವ ಬದಲು ದ್ವೇಷ ಬಿತ್ತುವವರ ಕರ್ಕಶ ಕೂಗು ಮೊಳಗುತ್ತಿದೆ. ಈ ಹೊತ್ತಿನಲ್ಲಿ ಶಿಥಿಲವಾಗುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು ಸಂತ–ಶರಣರ ಸಂದೇಶ ಯಾತ್ರೆ ಕೈಗೊಂಡಿದ್ದೇವೆ’ ಎಂದು ಜನತಂತ್ರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್‌.ಹಿರೇಮಠ ಹೇಳಿದರು.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಿರುದ್ಯೋಗ, ರೈತರ ಆತ್ಮಹತ್ಯೆ, ದಲಿತರು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಹಿಂಸೆ, ನಾಶವಾಗುತ್ತಿರುವ ನಿಸರ್ಗ ಸಂಪತ್ತು, ಶಿಕ್ಷಣದ ವ್ಯಾಪಾರೀಕರಣ ತಾಂಡವವಾಡುತ್ತಿವೆ. ಪ್ರಜೆಗಳು ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದರೂ ಆಳುವ ವರ್ಗವನ್ನು ಪ್ರಶ್ನಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರದ ದುರುಪಯೋಗವನ್ನು ಪ್ರಶ್ನಿಸುವ ಯುವ/ವಿದ್ಯಾರ್ಥಿಗಳ ಧ್ವನಿಯು ಕೇಳಲಾರಂಭಿಸಿದೆ. ಈ ಅನ್ಯಾಯದ ವಿರುದ್ಧದ ಸಿಟ್ಟು ಹಿಂಸೆಗೆ ತಿರುಗುವ ಬದಲು ನ್ಯಾಯದ ದಾರಿಯಲ್ಲಿ ಸಕ್ರಿಯ ರಚನಾತ್ಮಕ ಕೆಲಸಕ್ಕೆ ನಾಂದಿ ಹಾಡಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಸಂತ–ಶರಣರು ಅಸಮಾನತೆ, ಅಜ್ಞಾನ, ಶೋಷಣೆ, ಮೂಢನಂಬಿಕೆಗಳ ವಿರುದ್ಧ ಬಂಡೆದ್ದು ಸಮತಾ ಸಮಾಜದ ದಾರಿ ತೋರಿದ್ದಾರೆ. ಅರಿವು, ಜ್ಞಾನ, ಪ್ರೇಮ, ಬಂಧುತ್ವ, ಅಹಿಂಸೆ, ಕರುಣೆ, ನ್ಯಾಯ, ಸಮಾನತೆ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಈ ಕಾರಣದಿಂದ ಸಂತ–ಶರಣರ ಸಂದೇಶವನ್ನು ಜನರಿಗೆ ತಿಳಿಸಿ ಜಾಗೃತಿ ಉಂಟು ಮಾಡಲು ಯಾತ್ರೆ ಕೈಗೊಂಡಿದ್ದೇವೆ ಎಂದರು.

ಗೋಷ್ಠಿಯಲ್ಲಿ ವೆಂಕನಗೌಡ ಪಾಟೀಲ, ರಾಘವೇಂದ್ರ ಕುಷ್ಟಗಿ, ಹೊನ್ನಪ್ಪ ಮರೆಮ್ಮನವರ, ಅಶೋಕ ಪಾಳೆ, ಬಸವರಾಜ ಭೋವಿ ಇದ್ದರು.

ಯಾತ್ರೆಗೆ ಸ್ವಾಗತ:ಹಾವೇರಿ ನಗರಕ್ಕೆ ಬಂದ ಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ನಂತರ ಜಿ.ಎಚ್‌.ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್‌.ಆರ್‌.ಹಿರೇಮಠ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಯಾತ್ರೆಯು ಹಾವೇರಿಯಿಂದ ಶಿಶುನಾಳಕ್ಕೆ ಹೋಗಿ, ಕಪ್ಪತಗುಡ್ಡ, ಧಾರವಾಡ, ಬಾಗಲಕೋಟೆ, ಹುನಗುಂದದಲ್ಲಿ ಸಾಗಿ ಕೂಡಲಸಂಗಮಕ್ಕೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.