ADVERTISEMENT

ಕಾನೂನು ಭಂಗ ಚಳವಳಿ ಜ.25ರಂದು

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 15:05 IST
Last Updated 24 ನವೆಂಬರ್ 2021, 15:05 IST
ಎಸ್‌.ಆರ್‌. ಹಿರೇಮಠ
ಎಸ್‌.ಆರ್‌. ಹಿರೇಮಠ   

ಹಾವೇರಿ: ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ರದ್ದುಪಡಿಸಿದಂತೆ, ರಾಜ್ಯ ಸರ್ಕಾರ ಕೂಡ ರದ್ದುಪಡಿಸಬೇಕು. ಇಲ್ಲವಾದಲ್ಲಿ ಜನಾಂದೋಲನಗಳ ಮಹಾಮೈತ್ರಿ, ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ ಜ.25ರಂದು ನಾಗರಿಕ ಅಸಹಕಾರ ಹಾಗೂ ಕಾನೂನು ಭಂಗ ಚಳವಳಿ ಪ್ರಾರಂಭಿಸುತ್ತೇವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್.ಹಿರೇಮಠ ಎಚ್ಚರಿಕೆ ನೀಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಭೂ ಸುಧಾರಣೆ ಕಾಯ್ದೆ, ಕರ್ನಾಟಕ ಎಪಿಎಂಸಿ ಕಾಯ್ದೆ ಹಾಗೂ ಗೋ ಹತ್ಯಾ ನಿಷೇಧ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಡಿ.26ರಂದು ಮೈಸೂರಿನಲ್ಲಿ ಸಭೆ ನಡೆಸಿ, ಹೋರಾಟದ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಜನವರಿ 8 ಮತ್ತು 9ರಂದು ಧಾರವಾಡದಲ್ಲಿ ಸತ್ಯಾಗ್ರಹದ ತರಬೇತಿಯನ್ನು ನೀಡುತ್ತೇವೆ. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ ಎಂದರು.

ಎಂಎಸ್‌ಪಿ ಕಾನೂನುಬದ್ಧಗೊಳಿಸಲಿ:

ADVERTISEMENT

ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ನಡೆದ ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು ತನ್ನ ನಿಲುವು ಬದಲಿಸಿಕೊಂಡಿದೆ. ಇದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ಪ್ರಜಾಪ್ರಭುತ್ವ ಎಂದರೆ ಸರ್ವಾಧಿಕಾರತ್ವವಲ್ಲ. ಪ್ರಜೆಗಳ ಆಶಯಗಳನ್ನು ಅರಿತು ಸರ್ಕಾರ ನಡೆಸಬೇಕು.ರೈತರು ಬೆಳೆದ ಬೆಳೆಗೆ ‘ಕನಿಷ್ಠ ಬೆಂಬಲ ಬೆಲೆ’ (ಎಂ.ಎಸ್‌.ಪಿ)ಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಆಗ್ರಹಿಸಿದರು.

ಅಕ್ರಮ ಕಲ್ಲುಗಣಿಗಾರಿಕೆ ತಡೆಗಟ್ಟಿ:

ರಟ್ಟೀಹಳ್ಳಿ ತಾಲ್ಲೂಕು ಕಿರಿಗೇರಿ ಸಮೀಪ ಜಿ.ಎಂ.ಶುಗರ್ಸ್‌ ಆ್ಯಂಡ್‌ ಎನರ್ಜಿ ಕಂಪನಿ ನಡೆಸಿದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ದಿಟ್ಟ ಕ್ರಮ ಕೈಗೊಂಡಿರುವುದಕ್ಕೆ ಅಧಿಕಾರಿಗಳನ್ನು ಅಭಿನಂದಿಸುತ್ತೇವೆ.ಜಿಲ್ಲಾಧಿಕಾರಿ ಕೂಡಲೇ ಕಲ್ಲು ಗಣಿಗಾರಿಕೆಗೆ ಬಳಸಿದ ಕ್ರಷರ್‌ಗಳನ್ನು ವಶಕ್ಕೆ ಪಡೆಯಬೇಕು,ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಪೂರೈಕೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ ಎಂದರು.

ಕ್ರಿಮಿನಲ್‌ ಪ್ರಕರಣ ದಾಖಲಿಸಿ:

ಸಾವಿರಾರು ಟನ್‌ ಜಲ್ಲಿಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡು, ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿರುವ ಕಂಪನಿ ವಿರುದ್ಧಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವ ಹಣವನ್ನು ವಸೂಲಿ ಮಾಡಬೇಕು.ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸಿ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಲತೇಶ ಡಿ.ಜಿ., ಎನ್‌.ಸಿ. ದೊಡ್ಡಮನಿ, ಹುಸೇನ್‌ಸಾಬ್‌, ಎಂ.ಸಿ.ಹಾವೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.