ADVERTISEMENT

ಸುದ್ದಿ ಮುಟ್ಟಿಸುವ ಕಾಯಕ ಜೀವಿಗಳು

ಓದುಗರ ಸಂತೃಪ್ತಿಯಲ್ಲೇ ತೃಪ್ತಿ ಕಂಡುಕೊಂಡ ಪತ್ರಿಕಾ ಏಜೆಂಟರು, ವಿತರಕರು

ಎಂ.ವಿ.ಗಡಾದ
Published 4 ಸೆಪ್ಟೆಂಬರ್ 2021, 2:55 IST
Last Updated 4 ಸೆಪ್ಟೆಂಬರ್ 2021, 2:55 IST
ಹಾವೇರಿ ನಗರದಲ್ಲಿ ಪತ್ರಿಕಾ ವಿತರಣಾ ಕಾರ್ಯದಲ್ಲಿ ತೊಡಗಿರುವ ಏಜೆಂಟ್‌ ಜಯಪ್ಪ ಬಣಕಾರ ಮತ್ತು ವಿತರಕರು (ಸಂಗ್ರಹ ಚಿತ್ರ)
ಹಾವೇರಿ ನಗರದಲ್ಲಿ ಪತ್ರಿಕಾ ವಿತರಣಾ ಕಾರ್ಯದಲ್ಲಿ ತೊಡಗಿರುವ ಏಜೆಂಟ್‌ ಜಯಪ್ಪ ಬಣಕಾರ ಮತ್ತು ವಿತರಕರು (ಸಂಗ್ರಹ ಚಿತ್ರ)   

ಶಿಗ್ಗಾವಿ: ಮಳೆ, ಚಳಿ, ಬಿಸಿಲು ಎನ್ನದೇ ನಿತ್ಯ ಬೆಳಿಗ್ಗೆ ಮನೆ–ಮನೆಗಳಿಗೆ ಸುದ್ದಿ ಪತ್ರಿಕೆಗಳನ್ನು ವಿತರಿಸುವ ಪತ್ರಿಕಾ ವಿತರಕರ ಕಾರ್ಯ ಅನನ್ಯ.

ಕೊರೊನಾ ತುರ್ತು ಸಂದರ್ಭದಲ್ಲೂ ಸೋಂಕಿಗೆ ಧೃತಿಗೆಡದೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಾ, ಓದುಗರ ಮನೆ–ಮನೆಗೆ ಪತ್ರಿಕೆಗಳನ್ನು ಸುರಕ್ಷಿತವಾಗಿ ವಿತರಿಸಿ ಸೈ ಎನಿಸಿಕೊಂಡವರು ಪತ್ರಿಕಾ ಏಜೆಂಟರು ಮತ್ತು ವಿತರಕರು.

ನಿತ್ಯ ನಸುಕಿಗೆ ಎದ್ದು, ಪತ್ರಿಕಾ ಬಂಡಲ್‌ಗಳನ್ನು ಒಪ್ಪವಾಗಿ ಜೋಡಿಸಿಕೊಂಡು, ಸೈಕಲ್‌ ಮತ್ತು ಬೈಕ್‌ಗಳ ಮೂಲಕ ಗಲ್ಲಿ, ಓಣಿ, ಗುಡ್ಡಗಳಲ್ಲಿ ಸಂಚರಿಸುತ್ತಾ, ಪ್ರೀತಿಯ ಓದುಗರಿಗೆ ಮೆಚ್ಚಿನ ಪತ್ರಿಕೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ADVERTISEMENT

ಕೊರೊನಾ ಕಾಲದಲ್ಲಿ ಪತ್ರಿಕೆಯ ಹಣವನ್ನು ಕೈಗೆ ಕೊಡಲು ಜನರು ಹಿಂಜರಿಯುತ್ತಿದ್ದರು. ಕೆಲವರು ಪತ್ರಿಕೆಗಳೇ ಬೇಡ ಎನ್ನುತ್ತಿದ್ದರು. ಅಂಥ ಸಂದರ್ಭದಲ್ಲೂ ಧೃತಿಗೆಡದೆ ಓದುಗರ ಮನವೊಲಿಸಿ, ಪತ್ರಿಕೆಗಳನ್ನು ಹಾಕಿ, ಆನ್‌ಲೈನ್‌ ಮೂಲಕ ಪೇಮೆಂಟ್‌ ಮಾಡಿಸಿಕೊಳ್ಳುವ ಜಾಣತನ ತೋರಿದರು.

ಸೀಲ್‌ಡೌನ್ ಪ್ರದೇಶದಲ್ಲಿ ಪತ್ರಿಕೆ ಹಾಕಲು ಬಿಡುತ್ತಿರಲಿಲ್ಲ. ತಮ್ಮ ಜೀವದ ಹಂಗು ಬಿಟ್ಟು ಓಣಿ, ಓಣಿಗಳಲ್ಲಿ ಪತ್ರಿಕೆಗಳನ್ನು ಮುಟ್ಟಿಸುವ ಪ್ರಾಮಾಣಿಕ ಕಾರ್ಯ ನಡೆಸಿದ್ದಾರೆ. ಅಂತಹ ಪತ್ರಿಕಾ ವಾರಿಯರ್ಸ್‌ಗಳಿಗೆ ಒಂದು ಸಲಾಂ ಹೇಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಓದುಗರ ಸೇವೆಯಲ್ಲೇ ತೃಪ್ತಿ

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.ಸಾಕಷ್ಟು ಬಾರಿ ಅವಮಾನಗಳನ್ನು ಸಹಿಸಿಕೊಂಡು ಸೇವೆಯಲ್ಲೇ ತೃಪ್ತಿ ಕಂಡಿದ್ದಾರೆ. ಅಂತಹ ಸೇವಕರನ್ನು ಗುರುತಿಸಿ ಕೆಲವು ಸಂಘ, ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣೆ, ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಕೋವಿಡ್‌ದಲ್ಲಿ ಭಯ ಬಿಟ್ಟು ಬೆಳಿಗ್ಗೆ 5 ಗಂಟೆಯಿಂದ ಮನೆ– ಮನೆಗಳಿಗೆ ಪತ್ರಿಕೆ ಹಾಕಿರುವೆ. ಆರೋಗ್ಯ ಸಮಸ್ಯೆಯಾದ ಸಂದರ್ಭದಲ್ಲೂ ಪತ್ರಿಕೆ ಹಾಕುವುದನ್ನು ನಿಲ್ಲಿಸಿಲ್ಲ’ ಎನ್ನುತ್ತಾರೆ ಶಿಗ್ಗಾವಿ ಏಜೆಂಟ್‌ ಸಿದ್ದರಾಮಗೌಡ ಮೆಳ್ಳಾಗಟ್ಟಿ .

‘ಪತ್ರಿಕಾ ವಿತರಣೆಯನ್ನು 14 ವರ್ಷಗಳಿಂದ ಮಾಡುತ್ತಿರುವೆ. ಪತ್ರಿಕೆ ವಿತರಣೆಗೆ ಪ್ರತಿ ದಿನವೂ ನಸುಕಿನಲ್ಲಿಯೇ ಕಾರ್ಯ
ಪ್ರವೃತ್ತ
ವಾಗಬೇಕು. ಇದು ನಮಗೆ ಬೆಳಗಿನ ವ್ಯಾಯಾಮವೂ ಆಯಿತು, ಜೊತೆಗೆ ವೃತ್ತಿಯೂ ಆಯಿತು. ಗ್ರಾಹಕರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಸುದ್ದಿ ಹೊತ್ತು ತಂದು ಮುಟ್ಟಿಸುವಲ್ಲಿ ಆತ್ಮತೃಪ್ತಿಯಿದೆ’ ಎಂದು ಹಂಸಭಾವಿಯ ವಿತರಕಸಂದೀಪ ಬಾಸೂರ ತಿಳಿಸಿದರು.

‘ಪತ್ರಿಕಾ ವಿತರಣೆಯನ್ನು ಕಳೆದ 15 ವರ್ಷಗಳಿಂದ ಮಾಡುತ್ತಿದ್ದೇನೆ. ಈ ವೃತ್ತಿ ನನಗೆ ಆತ್ಮಸಂತೋಷ ನೀಡಿದೆ. ಸಮಾಜದಲ್ಲಿ ಗೌರವ ಕೊಟ್ಟಿದೆ. ಜನರು ನನ್ನನ್ನು ಪ್ರಜಾವಾಣಿ ಬಣಕಾರ ಎಂದೇ ಪ್ರೀತಿಯಿಂದ ಕರೆಯುತ್ತಾರೆ’ ಎನ್ನುತ್ತಾರೆ ಹಾವೇರಿ ನಗರದ ಪತ್ರಿಕಾ ಏಜೆಂಟ್‌ ಜಯಪ್ಪ ಬಣಕಾರ.

ಪತ್ರಿಕೆ ವಿತರಣೆ ಸವಾಲಿನ ಕೆಲಸ

‘ಕೋವಿಡ್ ಕಾರಣದಿಂದ ಶಾಲೆ, ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳು ಬಂದ್ ಆಗಿರುವುದರಿಂದ ಪತ್ರಿಕೆ ಸಂಖ್ಯೆ ಕಡಿಮೆಯಾಗಿರುವುದು ಆರ್ಥಿಕವಾಗಿ ಪೆಟ್ಟು ನೀಡಿದೆ. ಮಳೆ, ಚಳಿ ಎನ್ನದೇ ಬೆಳಗಿನ ಜಾವದಲ್ಲಿ ಪತ್ರಿಕೆ ಹಂಚಬೇಕು. ಹುಡುಗರು ಬರದೇ ಇದ್ದಲ್ಲಿ ನಾವೇ ಎರಡು ಕಡೆ ಪತ್ರಿಕೆ ಹಂಚಬೇಕಾಗುತ್ತದೆ’ ಎಂದು ವೃತ್ತಿಯ ಸಮಸ್ಯೆ ಸವಾಲುಗಳನ್ನು ಹಿರೇಕೆರೂರಿನ ಏಜೆಂಟ್‌ ಯಲ್ಲಪ್ಪ ಡಾಂಗೆ ತೋಡಿಕೊಂಡರು.

‘ನನಗೆ ಕೋವಿಡ್ ಸೋಂಕು ತಗುಲಿದರೂ ಎದೆಗುಂದದೆ ಪ್ರಜಾವಾಣಿ ವಿತರಣೆ ಕೆಲಸವನ್ನು ತಪ್ಪದೇ ಮಾಡಿದ್ದೇನೆ. ಜನತೆ ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ. ಪ್ರಜಾವಾಣಿ ಸಹಕಾರ ಕೊಟ್ಡಿದೆ. ಇದರಿಂದ ಆರ್ಥಿಕ ಸದೃಢತೆ ಕಂಡುಕೊಂಡಿದ್ದೇನೆ’ ಎನ್ನುತ್ತಾರೆ ರಾಣೆಬೆನ್ನೂರಿನ ಏಜೆಂಟ್‌ ಸಂಕಪ್ಪ ಮಾರನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.