ಹಾವೇರಿ: ‘ಜಿಲ್ಲೆಯಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಇವುಗಳ ಸಂತಾನ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಯಾರಿಗಾದರೂ ಬೀದಿನಾಯಿಗಳು ಕಚ್ಚಿದ ಬಗ್ಗೆ ವರದಿಯಾದರೆ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧವೇ ಅಪರಾಧ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಎಚ್ಚರಿಕೆ ನೀಡಿದರು.
ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಮಟ್ಟದ ಪ್ರಾಣಿ ಸಂತಾನ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ಹಾಗೂ ಸಂಚಾರಿ ಪಶು ಚಿಕಿತ್ಸಾ ಘಟಕದ ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅನಿಯಂತ್ರಿತ ಸಂತಾನ ಉತ್ಪತ್ತಿಯಿಂದ ಜಿಲ್ಲೆಯಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಜನರು ಮನೆಯಿಂದ ಹೊರ ಬರುವುದಕ್ಕೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕವಾಗಿ ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಈ ಪರಿಸ್ಥಿತಿ ನಿಯಂತ್ರಿಸುವುದು ಅತೀ ಅವಶ್ಯಕ‘ ಎಂದರು.
‘ಈ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಪಶುಪಾಲನಾ ಇಲಾಖೆಯ ಪಶುವೈದ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ತುರ್ತಾಗಿ ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು’ ಎಂದು ಅವರು ಸೂಚಿಸಿದರು.
‘ಜಿಲ್ಲೆಯಲ್ಲಿ ಒಂದು ಸರ್ಕಾರಿ ಗೋಶಾಲೆ ಹಾಗೂ ಮೂರು ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಗೋಶಾಲೆಯಲ್ಲಿನ ಜಾನುವಾರುಗಳನ್ನು ಮಾರ್ಗಸೂಚಿಗಳನ್ವಯ ಮಾನವೀಯ ದೃಷ್ಠಿಯಿಂದ ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಈ ಗೋಶಾಲೆಗಳ ಕಾರ್ಯನಿರ್ವಹಣೆ ಬಗ್ಗೆ ಸಂಬಂಧಪಟ್ಟ ಪಶುವೈದ್ಯಾಧಿಕಾರಿ ಹಾಗೂ ಪ್ರಾಣಿ ದಯಾ ಸಂಘದ ಒಬ್ಬ ಸದಸ್ಯರು ಪ್ರತಿ 15 ದಿನಕ್ಕೊಮ್ಮೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಶಿವಯೋಗಿ ಬ. ಎಲಿ ಮಾತನಾಡಿ, ‘ಸಂತಾನ ನಿಯಂತ್ರಣ ಕಾರ್ಯಕ್ರಮದಡಿ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ನಂತರದಲ್ಲಿ ಮೂರು ದಿನಗಳವರೆಗೆ ಸೂಕ್ತ ಚಿಕಿತ್ಸೆ ನೀಡಿ, ರೇಬಿಸ್ ಲಸಿಕೆ ಹಾಕಿ ಅವುಗಳು ಮೊದಲಿದ್ದ ಜಾಗದಲ್ಲಿ ಬಿಟ್ಟು ಬರಲಾಗುವುದು’ ಎಂದು ಹೇಳಿದರು.
‘ವಿಶ್ವ ರೇಬಿಸ್ ದಿನದ ಅಂಗವಾಗಿ ಸೆ. 28ರಂದು ಜಿಲ್ಲೆಯಾದ್ಯಂತ ರೇಬಿಸ್ ಲಸಿಕಾ ಕಾರ್ಯಕ್ರಮ ಹಾಗೂ ರೇಬಿಸ್ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಸುಪ್ರೀಂಕೋರ್ಟ್ ಆದೇಶದಂತೆ, ಪ್ರತಿ ವಾರ್ಡ್, ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಾಂದ್ರತೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳನ್ನು ಹೊರತುಪಡಿಸಿ ಇತರೆ ನಿರ್ದಿಷ್ಟ ಸ್ಥಳವನ್ನು ಆಹಾರ ವಿತರಣೆಗಾಗಿ ಗುರುತಿಸಿಕೊಳ್ಳಲಾಗುವುದು’ ಎಂದರು.
‘ಪಶು ಸಂಜೀವಿನಿ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 9 ಸಂಚಾರಿ ಪಶು ಚಿಕಿತ್ಸಾ ಘಟಕಗಳಿವೆ. ಈ ಯೋಜನೆಯು ರೈತರಿಗೆ ತುಂಬ ಅನುಕೂಲಕರವಾದ ಯೋಜನೆಯಾಗಿದೆ. ಇದರಿಂದಾಗಿ ಜಾನುವಾರುಗಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 7019 ಜಾನುವಾರುಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯಲ್ಲಿ ಯಾವುದೇ ಸಂದರ್ಭದಲ್ಲಾದರೂ ರೈತರು ಸಹಾಯವಾಣಿ 1962 ಸಂಖ್ಯೆಗೆ ಕರೆ ಮಾಡಿ ಚಿಕಿತ್ಸೆ ಸೌಲಭ್ಯ ಪಡೆಯಬಹುದು’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಎಸ್‌ಪಿ ಲಕ್ಷ್ಮಣ ಶಿರಕೋಳ ಇದ್ದರು.
ಜಾಗೃತಿ ಕರಪತ್ರ ಬಿಡುಗಡೆ
ಜಿಲ್ಲೆಯಲ್ಲಿ ಬೀದಿನಾಯಿಗಳು ಹೆಚ್ಚಾಗಿದ್ದರಿಂದ ದಾಳಿ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಇಂಥ ಬೀದಿನಾಯಿಗಳ ಬಗ್ಗೆ ಎಚ್ಚರಿಕೆ ವಹಿಸಲು ಹಾಗೂ ಅತ್ಯವಶ್ಯಕ ಮಾಹಿತಿಯುಳ್ಳ ಕರಪತ್ರಗಳನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ಬೀದಿನಾಯಿಗಳ ಗುಣಲಕ್ಷಣ ಹಾಗೂ ರೇಬಿಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮಾಹಿತಿ ಕರಪತ್ರದಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.