ADVERTISEMENT

ವಿದ್ಯಾರ್ಥಿ ಸಾವು: ಶಾಲೆ ನಿರ್ಲಕ್ಷ್ಯ ಆರೋಪ; ಸ್ವಯಂಪ್ರೇರಿತ ದೂರು

ಶಿವಯೋಗೇಶ್ವರ ಶಾಲೆ ಆವರಣದಲ್ಲಿ ವಿದ್ಯಾರ್ಥಿ ಸಾವು | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:23 IST
Last Updated 29 ಜುಲೈ 2025, 2:23 IST
ಹಾವೇರಿ ಜಿಲ್ಲೆಯ ಹಂಸಬಾವಿಯ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಅವಘಡ ಸಂಭವಿಸಿದ್ದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಅವರು ಪೊಲೀಸರಿಂದ ಮಾಹಿತಿ ಪಡೆದುಕೊಂಡರು 
ಹಾವೇರಿ ಜಿಲ್ಲೆಯ ಹಂಸಬಾವಿಯ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಅವಘಡ ಸಂಭವಿಸಿದ್ದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಅವರು ಪೊಲೀಸರಿಂದ ಮಾಹಿತಿ ಪಡೆದುಕೊಂಡರು    

ಹಾವೇರಿ: ಜಿಲ್ಲೆಯ ಹಂಸಬಾವಿಯ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ತೆಂಗಿನ ಮರದ ಸಮೇತ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ವಿದ್ಯಾರ್ಥಿ ಶಾ ಕಲಂದರ ರಟ್ಟೀಹಳ್ಳಿ ಎಂಬಾತ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಘಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ, ಶಾಲೆ ಶಿಕ್ಷಕರು ಹಾಗೂ ಹಿರೇಕೆರೂರು ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಸಭೆ ನಡೆಸಿದರು. ಮೃತಪಟ್ಟ ವಿದ್ಯಾರ್ಥಿ ಮನೆಗೂ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು. ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಭೇಟಿಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಮತ್ನಾಳ, ‘ಶಾಲೆ ಆವರಣದಲ್ಲಿ ನಡೆದಿರುವ ಈ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಶಾಲೆ–ಕಾಲೇಜಿನಲ್ಲಿ ಇಂಥ ಘಟನೆ ನಡೆಯದಂತೆ ಎಚ್ಚರ ವಹಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗುವುದು’ ಎಂದರು.

ADVERTISEMENT

‘ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಹಳೇ ಮರಗಳಿದ್ದವು. ಜೊತೆಗೆ, ವಿದ್ಯುತ್ ತಂತಿಯೂ ಹಾದು ಹೋಗಿದೆ. ವಿದ್ಯುತ್ ತಂತಿ ವಿಚಾರವಾಗಿ 2023ರ ಮಾರ್ಚ್ 10ರಂದು ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ, ‘ಶಾಲೆ ಆವರಣದಲ್ಲಿರುವ ವಿದ್ಯುತ್ ತಂತಿ ಹಾಗೂ ಕಂಬಗಳ ಬಗ್ಗೆ ಮಾಹಿತಿ ನೀಡಿ’ ಎಂದು ಸೂಚನೆ ಕೊಟ್ಟಿತ್ತು. ಇದೇ ಸುತ್ತೋಲೆ ಆಧರಿಸಿ ಹಿರೇಕೆರೂರು ಬಿಇಒ ಅವರು, ಶಿವಯೋಗೇಶ್ವರ ಶಾಲೆಗೂ ಪತ್ರ ಬರೆದಿದ್ದರು ಎಂಬುದು ಪ್ರಾಥಮಿಕವಾಗಿ ಗೊತ್ತಾಗಿದೆ’ ಎಂದರು.

‘ಪತ್ರಕ್ಕೆ ಶಿವಯೋಗೇಶ್ವರ ಶಾಲೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ತಾಲ್ಲೂಕಿನ ಬೇರೆ ಶಾಲೆಗಳಿಂದ ಉತ್ತರ ಬಂದಿತ್ತು. ಅಲ್ಲೆಲ್ಲ ವಿದ್ಯುತ್ ತಂತಿ ತೆರವು ಮಾಡಲಾಗಿತ್ತು’ ಎಂಬುದಾಗಿ ಬಿಇಒ ಮಾಹಿತಿ ನೀಡಿದ್ದಾರೆ. ಇದನ್ನು ಗಮನಿಸಿದರೆ, ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ’ ಎಂದು ಹೇಳಿದರು.

‘ವಿದ್ಯಾರ್ಥಿ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು, ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡಿದ್ದಾರೆ. ಸುತ್ತೋಲೆ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಈ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಶಾಲೆಯವರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು’ ಎಂದು ಹೇಳಿದರು.

ವಿದ್ಯಾರ್ಥಿಗೆ ಪರಿಹಾರ: ‘ಮೃತಪಟ್ಟಿರುವ ವಿದ್ಯಾರ್ಥಿ ಶಾ ಕಲಂದರ ರಟ್ಟೀಹಳ್ಳಿ ಅವರ ಕುಟುಂಬಕ್ಕೆ ಶಿಕ್ಷಕರ ಕಲ್ಯಾಣ ನಿಧಿಯಿಂದ ₹ 1.25 ಲಕ್ಷ ಪರಿಹಾರ ನೀಡುವುದಾಗಿ ಬಿಇಒ ತಿಳಿಸಿದ್ದಾರೆ. ಆಯೋಗದಿಂದಲೂ ಪ್ರತಿ ತಿಂಗಳು ₹ 4 ಸಾವಿರದಂತೆ ಒಟ್ಟು ₹ 48 ಸಾವಿರ ಕೊಡಿಸಲಾಗುವುದು’ ಎಂದು ರಾಮತ್ನಾಳ ತಿಳಿಸಿದರು.

‘ಹೆಸ್ಕಾನಿಂದಲೂ ₹ 5 ಲಕ್ಷ ಪರಿಹಾರ ನೀಡಲು ಅವಕಾಶವಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆ ಆಡಳಿತ ಮಂಡಳಿಯೂ ಪರಿಹಾರ ನೀಡುವುದಾಗಿ ಮಾಹಿತಿ ನೀಡಿದೆ’ ಎಂದರು.  

ಮಾಜಿ ಶಾಸಕ ಭೇಟಿ: ಅವಘಡದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಮನೆಗೆ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ಸೋಮವಾರ ಭೇಟಿ ನೀಡಿ, ಪೋಷಕರಿಗೆ ಸಾಂತ್ವಾನ ಹೇಳಿದರು. ವೈಯಕ್ತಿಕವಾಗಿ ಪರಿಹಾರ ವಿತರಿಸಿದರು.

ಪ್ರಕರಣದ ತನಿಖೆ: ‘ವಿದ್ಯಾರ್ಥಿ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಇದೊಂದು ಆಕಸ್ಮಿಕ ಘಟನೆಯೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೂ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲು ತನಿಖೆ ಮುಂದುವರಿಸಲಾಗಿದೆ’ ಎಂದು ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ ತಿಳಿಸಿದರು.

‘ಹಳೇ ಮರ ತೆರವು’

‘ಶಾಲೆ ಆವರಣದಲ್ಲಿ ಹೆಚ್ಚಾಗಿದ್ದ ಹಳೇ ಮರಗಳನ್ನು ತೆರವುಗೊಳಿಸುವಲ್ಲಿ ಶಿವಯೋಗೇಶ್ವರ ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿತ್ತು. ವಿದ್ಯುತ್ ತಂತಿ ಸ್ಥಳಾಂತರಕ್ಕೂ ಕ್ರಮ ಕೈಗೊಂಡಿರಲಿಲ್ಲ. ಇದ್ದರಿಂದ ಈ ಅವಘಡ ಸಂಭವಿಸಿದೆ’ ಎಂಬ ಆರೋಪ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಶಾಲೆ ಆಡಳಿತ ಮಂಡಳಿ ಆವರಣದಲ್ಲಿರುವ ಹಳೇ ಮರಗಳನ್ನು ತೆರವುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.