
ಹಾವೇರಿ: ‘ಹಾಸ್ಟೆಲ್‌ಗಳ ಮೂಲಕವೇ ನಮ್ಮ ವಿದ್ಯಾರ್ಥಿ ಚಳವಳಿ ಶುರುವಾಗಿದೆ. ಇಂದಿನ ದಿನಮಾನಗಳಲ್ಲಿಯೂ ಹಾಸ್ಟೆಲ್‌ಗಳು ಸಾಕಷ್ಟು ಮೂಲ ಸೌಕರ್ಯ ಕೊರತೆ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳ ಇತ್ಯರ್ಥಕ್ಕಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ನಡೆದ ‘ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನಾವೆಲ್ಲರೂ ಹಾಸ್ಟೆಲ್‌ನಲ್ಲಿದ್ದುಕೊಂಡು ಶಿಕ್ಷಣ ಪಡೆದಿದ್ದೇವೆ. ಹಾಸ್ಟೆಲ್ ಸಮಸ್ಯೆಗಳನ್ನು ಖುದ್ದು ಅನುಭವಿಸಿದ್ಧೇವೆ. ಎಸ್‌ಎಫ್‌ಐ ಸಹ ಹಾಸ್ಟೆಲ್ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹೋರಾಟ ನಡೆಸುತ್ತಿದೆ’ ಎಂದರು.
‘ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಊಟ ಸಿಗುತ್ತಿರಲಿಲ್ಲ. ಗುಣಮಟ್ಟದ ಆಹಾರ ಇರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಅಂದಿನ ಸ್ಥಳೀಯ ಶಾಸಕ, ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಗೆ ಹಾಕಿಸಿದರು. ನಮ್ಮನ್ನೂ ಜೈಲಿಗೆ ಕಳುಹಿಸಿದರು. ಇದರ ವಿರುದ್ಧ ಎಸ್‌ಎಫ್‌ಐ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಿತು. ಬಳಿಕವೇ, ವಿದ್ಯಾರ್ಥಿಗಳನ್ನು ವಾಪಸು ಹಾಸ್ಟೆಲ್‌ಗೆ ಸೇರಿಸಿಕೊಳ್ಳಲಾಯಿತು. ಇಂಥ ಹೋರಾಟಗಳು ನಿರಂತರವಾಗಿ ನಡೆದರೆ ಮಾತ್ರ ಆಡಳಿತ ವರ್ಗ ಎಚ್ಚರಿಕೆಯಿಂದ ಕೆಲಸ ಮಾಡುತ್ತದೆ’ ಎಂದು ಹೇಳಿದರು.
‘ರಾಣೆಬೆನ್ನೂರಿನಲ್ಲಿ ಹಾಸ್ಟೆಲ್ ಕಟ್ಟಟದಿಂದ ವಿದ್ಯಾರ್ಥಿಯೊಬ್ಬರು ಬಿದ್ದು ಮೃತಪಟ್ಟಾಗಲೂ ಹೋರಾಟ ಮಾಡಿದೆವು. ಎಸ್‌ಎಫ್‌ಐ ಹೋರಾಟ ಮಾಡಿ, ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರದಿಂದ ₹ 25 ಲಕ್ಷ ಪರಿಹಾರ ಕೊಡಿಸಿತು. ಸಮಾವೇಶದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರೂ ಹಾಸ್ಟೆಲ್ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹೋರಾಟ ಮಾಡಬೇಕು. ಅಂದಾಗ ಮಾತ್ರ ಸಮಾವೇಶ ನಡೆಸಿದ್ದು ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.
ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷೆ ಪರಿಮಳಾ ಜೈನ್ ಮಾತನಾಡಿ, ‘ಈ ಸಮಾವೇಶದ ಮೂಲಕ ಇವತ್ತು ಹೋರಾಟದ ಹೆಜ್ಜೆಗಳು ಆರಂಭವಾಗಿವೆ. ಮುಂದಿನ ದಿನಮಾನಗಳಲ್ಲಿ ಹೋರಾಟದಿಂದ ಬದಲಾವಣೆ ಆಗಬೇಕು’ ಎಂದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ‘ಎಸ್‌ಎಫ್‌ಐ ಹೋರಾಟಗಳನ್ನು ನಾನು ಗಮನಿಸುತ್ತ ಬಂದಿದ್ದೇನೆ. ಬಂಡಾಯ ಸಾಹಿತ್ಯದ ಆಶಯಗಳನ್ನು ಒಳಗೊಂಡಿರುವ ಸಂಘಟನೆ ಇದಾಗಿದೆ. ಎಸ್‌ಎಫ್‌ಐ ಹೋರಾಟಗಳಿಗೆ ಸದಾ ಬೆಂಬಲವಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಸ್., ಸಮಾವೇಶದ ಸ್ವಾಗತ ಸಮಿತಿ ಸದಸ್ಯರಾದ ನಾಗರಾಜ ಕಾಳೆ, ರೇಣುಕಾ ಕಹಾರ, ಸತೀಶ ಎಂ.ಬಿ., ಮಾರುತಿ ತಳವಾರ, ಅಬ್ಲೀಕರ ಶಿವಪ್ಪ ಎನ್., ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಟಿ.ಎಸ್., ಕೇಂದ್ರ ಸಮಿತಿ ಸದಸ್ಯರಾದ ಸುಜಾತಾ ವೈ., ಕೇಂದ್ರ ಸಮಿತಿ ಸದಸ್ಯರು ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.