ADVERTISEMENT

ಹಾವೇರಿ | ವೃದ್ಧಾಶ್ರಮ ವಾಸಿಗಳಿಗೆ ಅಡುಗೆ ಬಡಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:55 IST
Last Updated 17 ಅಕ್ಟೋಬರ್ 2025, 2:55 IST
ಹಾವೇರಿ ನಾಗೇಂದ್ರನಮಟ್ಟಿ ಬಳಿಯ ಶಕ್ತಿಧಾಮ ವೃದ್ಧಾಶ್ರಮದ ವಾಸಿಗಳಿಗೆ ಜಿ.ಎಚ್‌. ಕಾಲೇಜು ವಿದ್ಯಾರ್ಥಿಗಳು ಗುರುವಾರ ಅಡುಗೆ ಬಡಿಸಿದರು
ಹಾವೇರಿ ನಾಗೇಂದ್ರನಮಟ್ಟಿ ಬಳಿಯ ಶಕ್ತಿಧಾಮ ವೃದ್ಧಾಶ್ರಮದ ವಾಸಿಗಳಿಗೆ ಜಿ.ಎಚ್‌. ಕಾಲೇಜು ವಿದ್ಯಾರ್ಥಿಗಳು ಗುರುವಾರ ಅಡುಗೆ ಬಡಿಸಿದರು   

ಹಾವೇರಿ: ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ (ಜೆ.ಎಚ್‌.) ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಆಹಾರ ದಿನವನ್ನು ಗುರುವಾರ ವಿಶೇಷವಾಗಿ ಆಚರಿಸಿದರು.

ನಗರದ ನಾಗೇಂದ್ರನಮಟ್ಟಿ ಬಳಿ ಇರುವ ಶಕ್ತಿಧಾಮ ವೃದ್ಧಾಶ್ರಮಕ್ಕೆ ತೆರಳಿದ್ದ ವಿದ್ಯಾರ್ಥಿಗಳು, ಅಲ್ಲಿಯ ವೃದ್ಧರಿಗೆ ಊಟ ಬಡಿಸಿ ಆಹಾರದ ಮಹತ್ವ ತಿಳಿಸಿದರು.

ಕಾಲೇಜಿನ ಎನ್‌ಎಸ್‌ಎಸ್‌ ಘಟಕದಿಂದ ಪ್ರತಿ ವರ್ಷವೂ ಆಹಾರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ವರ್ಷವೂ ವಿದ್ಯಾರ್ಥಿಗಳೇ ಖುದ್ದಾಗಿ ಅಡುಗೆ ಸಿದ್ಧಪಡಿಸಿದ್ದರು. ಅದೇ ಅಡುಗೆಯನ್ನು ವೃದ್ಧಾಶ್ರಮಕ್ಕೆ ಕೊಂಡೊಯ್ದು ಹಿರಿಯ ನಾಗರಿಕರಿಗೆ ನೀಡಿದರು.

ADVERTISEMENT

ನಾನಾ ಕಾರಣಗಳಿಂದ ವೃದ್ಧಾಶ್ರಮ ಸೇರಿರುವ ಹಿರಿಯ ನಾಗರಿಕರು, ಕುಟುಂಬದ ಸದಸ್ಯರಿಂದ ದೂರವುಳಿದುಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಊಟ ಮಾಡುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರ ಜೊತೆ ಸಾಮೂಹಿಕ ಭೋಜನ ಸವಿದು ಕುಟುಂಬದ ವಾತಾವರಣ ನಿರ್ಮಿಸಿದರು.

ವೃದ್ಧಾಶ್ರಮದ ನಿವಾಸಿಗಳೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಅವರ ಅನುಭವಗಳನ್ನು ತಿಳಿದುಕೊಂಡರು. ಪ್ರತಿಯೊಬ್ಬ ವೃದ್ಧರ ಕಥೆಗಳನ್ನು ಕಣ್ಣೀರಿಟ್ಟರು. ದುಡಿಯುವ ವಯಸ್ಸಿನಲ್ಲಿ ಕುಟುಂಬಕ್ಕಾಗಿ ದುಡಿದು ಮಕ್ಕಳನ್ನು ಬೆಳೆಸಿದ್ದ ಪೋಷಕರು, ಇಂದು ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿರುವುದನ್ನು ಕಂಡು ಮರುಕಪಟ್ಟರು.

ವಿದ್ಯಾರ್ಥಿಗಳ ವಿಶೇಷ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಎಂ.ಹೊಳ್ಳಿಯವರ, ರೂಪಾ ಕೋರೆ, ರಮೇಶ್ ಅಜರೆಡ್ಡಿ, ಕೆ.ಎಚ್. ಬ್ಯಾಡಗಿ, ಆತ್ಮಾನಂದ ಎಚ್., ಪ್ರಭಾಕರ ಸಿ., ಶಮನ್ತ್ ಕುಮಾರ್ ಕೆ.ಎಸ್., ಶಿವಾನಂದ ಪಾಯಮಲ್ಲೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.