ADVERTISEMENT

ಹಾವೇರಿ: ಹೊಮ್ಮುವುದೇ ಚಿನ್ನದ ಮೀನು

ಈಜುಕೊಳದಲ್ಲಿ ಹೊಸ ಸಂಚಲನ: ಹಾವೇರಿಯಲ್ಲಿ ಹೊಮ್ಮುವುದೇ ಚಿನ್ನದ ಮೀನು!

ಹರ್ಷವರ್ಧನ ಪಿ.ಆರ್.
Published 26 ಮೇ 2019, 19:45 IST
Last Updated 26 ಮೇ 2019, 19:45 IST
ಹಾವೇರಿ ಈಜುಕೊಳದಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿರುವ ಎನ್‌ಐಎಸ್ ತರಬೇತುದಾರ ಸೂರಜ್ ವಿಜಯ್‌ ಶ್ರೇಷ್ಠಿ
ಹಾವೇರಿ ಈಜುಕೊಳದಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿರುವ ಎನ್‌ಐಎಸ್ ತರಬೇತುದಾರ ಸೂರಜ್ ವಿಜಯ್‌ ಶ್ರೇಷ್ಠಿ   

ಹಾವೇರಿ:ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಬೇಸಿಗೆ ತರಬೇತಿ ನಡೆದಿದ್ದು, ಮಕ್ಕಳಿಗೆ ಹೊಸ ಅವಕಾಶಗಳನ್ನು ತೆರೆದಿದೆ. ‘ಇಲ್ಲಿನ ಮಕ್ಕಳಲ್ಲಿ ಪ್ರತಿಭೆಯಿದ್ದು, ಪ್ರೋತ್ಸಾಹ ಬೇಕಾಗಿದೆ’ ಎಂಬುದು ಈಜಿನ ಚಿನ್ನದ ಮೀನುಗಳ ಅಭಿಮತ.

ಜಿಲ್ಲಾ ಕೇಂದ್ರದಲ್ಲಿ ಕ್ರೀಡಾ ಮೂಲಸೌಕರ್ಯಗಳ ಕೊರತೆಯಿದ್ದು, ಈಜುಕೊಳವೂ ನನೆಗುದಿಗೆ ಬಿದ್ದಿತ್ತು. ಕಳೆದ ವರ್ಷ ಕೊಳದ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಿ, ಈಜು ಪ್ರಿಯರಿಗೆ ಅವಕಾಶ ಕಲ್ಪಿಸಲಾಗಿತ್ತು.

ಇದರಿಂದಾಗಿ ಬೆಂಗಳೂರಿನ ಸಿದ್ಧಾರ್ಥ ಎಂಟರ್ಪ್ರೈಸಸ್‌ ಶಿಬಿರ ಬೇಸಿಗೆ ಆಯೋಜಿಸಿತ್ತು. ಮಾರ್ಚ್‌ 8ರಿಂದ ನಾಲ್ಕು ಅವಧಿಯಲ್ಲಿ ಎಂಟು ತಂಡಗಳಿಗೆ (ಬೆಳಿಗ್ಗೆ, ಸಂಜೆ) ತರಬೇತಿ ನೀಡಲಾಗಿದ್ದು, ಕೊನೆ ಅವಧಿಯ ತಂಡಗಳು ತರಬೇತಿಯಲ್ಲಿವೆ. ಮಕ್ಕಳು ಮಾತ್ರವಲ್ಲ, ಹಿರಿಯರು, ಮಹಿಳೆಯರೂ ತರಬೇತಿ ಪಡೆದಿರುವುದು ವಿಶೇಷ.

ADVERTISEMENT

‘ಈಜು ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಮಕ್ಕಳ ಸಾಮರ್ಥ್ಯ ವೃದ್ಧಿಗೆ ಅತ್ಯುತ್ತಮ. ನೀವು ಈಜಲೇ ಬೇಕೆಂದಿಲ್ಲ, ನೀರಿಗಿಳಿದರೂ ದೇಹಕ್ಕೆ ವ್ಯಾಯಾಮ. ಮನಸ್ಸಿಗೆ ಆಹ್ಲಾದ. ರೋಗಗಳಿಂದ ದೂರ ಇರಬಹುದು’ ಎನ್ನುತ್ತಾರೆ ದೈನಂದಿನ ಈಜುಗಾರರಾದ ಪೊಲೀಸ್ ಇನ್‌ಸ್ಪೆಕ್ಟರ್ ಬಸವರಾಜ ಹಳಬಣ್ಣನವರ, ಚಿದಾನಂದ ಹಾಗೂ ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನೆವರ್.

ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವ ಬಾಳಾಸೋ ಶಿವಾಜಿ ಕದಂ, ಸೂರಜ್‌ ವಿಜಯ್ ಶ್ರೇಷ್ಠಿ, ಮಹಿಳಾ ತರಬೇತುಗಾರ್ತಿ ಮತ್ತಿತರ ತಜ್ಞರು ಇಲ್ಲಿ ತರಬೇತುದಾರರಾಗಿದ್ದಾರೆ.

‘ಈಜು, ಸರ್ವಾಂಗಣ ಸುಂದರ ವ್ಯಾಯಾಮ. ಇತರ ಕ್ರೀಡೆಗಳು ದೇಹದ ನಿರ್ದಿಷ್ಟ ಅಂಗಗಳಿಗೆ ಒತ್ತು ನೀಡಿದ್ದರೆ, ಈಜು ಅಡಿಯಿಂದ ಮುಡಿ ತನಕ (ಪಾದಿಂದ ತಲೆ ತನಕ) ವ್ಯಾಯಾಮ ನೀಡುತ್ತದೆ’ ಎನ್ನುತ್ತಾರೆ ತರಬೇತುದಾರ ಸೂರಜ್‌ ವಿಜಯ್ ಶ್ರೇಷ್ಠಿ.

‘ಮಕ್ಕಳಿಗೆ ಆಂಗಿಕ ಚಲನೆ, ಚಲನೆಯ ಗುಣಮಟ್ಟ, ಅಭ್ಯಾಸ ಸೇರಿದಂತೆ ಗುರಿ ಆಧರಿತ ತರಬೇತಿ ನೀಡಬೇಕು. ಇಲ್ಲಿ ಒಬ್ಬರು ಕಾಯಂ ಎನ್‌ಐಎಸ್ ತರಬೇತುದಾರರು ಇದ್ದರೆ ಉತ್ತಮ’ ಎನ್ನುತ್ತಾರೆ ಎನ್‌ಐಎಸ್ ತರಬೇತುದಾರ ಶ್ರೇಷ್ಠಿ.

‘ಗ್ರಾಮೀಣ ಭಾಗದ ಇಲ್ಲಿನ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಹಾಗೂ ದೈಹಿಕ ಸಾಮರ್ಥ್ಯವಿದೆ. ಅವರಿಗೆ ತಾಂತ್ರಿಕ ಅಂಶಗಳು, ಕೌಶಲಗಳು, ಸಾಮರ್ಥ್ಯ ವೃದ್ಧಿಯ ನುರಿತ ತರಬೇತಿ ನೀಡಿದರೆ, ಚಿನ್ನದ ಮೀನನ್ನು ಹಾವೇರಿ ಕೊಳದಿಂದಲೇ ಹೊಮ್ಮಿಸಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಶ್ರೇಷ್ಠಿ ಮತ್ತು ಕದಂ.

ಬೆಂಗಳೂರಿನಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್, ಬಸವನಗುಡಿ ಅಕ್ವಾಟಿಕ್ ಸೆಂಟರ್, ಡಾಲ್ಪಿನ್ ಅಕ್ವಾಟಿಕ್ಸ್‌ ಮತ್ತಿತರ ಪ್ರತಿಷ್ಠಿತ ಈಜು ಕೇಂದ್ರಗಳಿವೆ. ಹಾವೇರಿಯಲ್ಲಿ ಆಸಕ್ತ 25ರಿಂದ30 ಮಕ್ಕಳು ದೊರೆತರೆ, ಈಜುಪಟುಗಳನ್ನು ರೂಪಿಸಲು ಸಾಧ್ಯ ಎನ್ನುತ್ತಾರೆ ತರಬೇತುದಾರರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ. ಮಕ್ಕಳು ಮಾತ್ರವಲ್ಲ ಪುರುಷರು, ಮಹಿಳೆಯರು ಸೇರಿದಂತೆ ಹಲವರು ತರಬೇತಿ ಪಡೆದರು. ಇನ್ನೂ ಕೆಲವರು ಈಜಿನ ಮೋಜು ಅನುಭವಿಸಿದರು ಎನ್ನುತ್ತಾರೆ ತರಬೇತಿ ಪಡೆದ ಆಶಾ.

ಶೈಕ್ಷಣಿಕ ಅಭಿವೃದ್ಧಿ:ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಏಕಾಗ್ರತೆ, ಜ್ಞಾಪಕ ಶಕ್ತಿ, ಸಾಮರ್ಥ್ಯ ಹೆಚ್ಚಳ ಸಾಧ್ಯವಾಗುತ್ತದೆ. ಹೀಗಾಗಿಯೇ, ದೇಶದ ಬಹುತೇಕ ಈಜುಪಟುಗಳು ಉನ್ನತ ಶಿಕ್ಷಣ (ವೈದ್ಯಕೀಯ, ಬಿ.ಇ, ಸ್ನಾತಕೋತ್ತರ) ಪದವೀಧರರಾಗಿದ್ದಾರೆ. ಬಹುತೇಕ ಇಂಟರ್‌ನ್ಯಾಷನಲ್ ಶಾಲೆಗಳು ಮಕ್ಕಳಿಗೆ ಈಜು ತರಬೇತಿಯನ್ನು ಇರಿಸಿವೆ ಎನ್ನುತ್ತಾರೆ ತರಬೇತುದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.