ADVERTISEMENT

ಹಾವೇರಿ | ₹3,300 ದರಕ್ಕೆ ಪಟ್ಟು; ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:59 IST
Last Updated 11 ನವೆಂಬರ್ 2025, 2:59 IST
ಪ್ರತಿ ಟನ್‌ ಕಬ್ಬಿಗೆ ₹ 3,300 ದರ ನೀಡಬೇಕು ಎಂದು ಆಗ್ರಹಿಸಿ ಹಾವೇರಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೋಮವಾರದಿಂದ ಆರಂಭಿಸಿರುವ ಧರಣಿಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು 
ಪ್ರತಿ ಟನ್‌ ಕಬ್ಬಿಗೆ ₹ 3,300 ದರ ನೀಡಬೇಕು ಎಂದು ಆಗ್ರಹಿಸಿ ಹಾವೇರಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೋಮವಾರದಿಂದ ಆರಂಭಿಸಿರುವ ಧರಣಿಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು    

ಹಾವೇರಿ: ‘ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ಟನ್‌ ಕಬ್ಬಿಗೆ ₹ 3,300 ನೀಡಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಗರದಲ್ಲಿ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ರೈತರು ನಡೆಸಿದ್ದ ಹೋರಾಟದಿಂದ ಎಚ್ಚೆತ್ತ ರಾಜ್ಯ ಸರ್ಕಾರ, ₹ 3,300 ದರ ನಿಗದಿ ಮಾಡಿದೆ. ಈ ದರವನ್ನು ಹಾವೇರಿ ಜಿಲ್ಲೆ ರೈತರಿಗೂ ನೀಡುವಂತೆ ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ.

ಧರಣಿಗೂ ಮುನ್ನವೇ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ರೈತರು ಹಾಗೂ ಕಾರ್ಖಾನೆ ಪ್ರತಿನಿಧಿಗಳ ಜೊತೆ ಭಾನುವಾರ ಸಭೆ ನಡೆಸಿದ್ದರು. ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ರೈತರು ಸೋಮವಾರದಿಂದ ಧರಣಿ ಆರಂಭಿಸಿದ್ದಾರೆ.

ADVERTISEMENT

ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಪೆಂಡಾಲ್‌ ನಿರ್ಮಿಸಿರುವ ರೈತರು, ಅದೇ ಸ್ಥಳದಲ್ಲಿ ಕುಳಿತು ಧರಣಿ ನಡೆಸುತ್ತಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಈ ಧರಣಿ ಹಮ್ಮಿಕೊಳ್ಳಲಾಗಿದೆ.

‘ಕಬ್ಬು ಬೆಲೆ ನಿಗದಿಗೆ ಸಂಬಂಧಪಟ್ಟಂತೆ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ವರ್ಷ ಬೆಳಗಾವಿಯಲ್ಲಿ ಹೋರಾಟವೂ ತೀವ್ರ ಸ್ವರೂಪ ಪಡೆದಿತ್ತು. ಇದರಿಂದ ಎಚ್ಚೆತ್ತ ಸರ್ಕಾರ, ಬೆಳಗಾಗಿ ಹಾಗೂ ಬಾಗಲಕೋಟೆ ಜಿಲ್ಲೆಯ ಕಬ್ಬಿಗೆ ಟನ್‌ಗೆ ₹3,300 ಕೊಡಿಸಲು ಮುಂದಾಗಿದೆ. ಆದರೆ, ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಮಾತ್ರ ಈ ದರ ಅನ್ವಯವಾಗುವುದಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ, ಹಾವೇರಿ ಜಿಲ್ಲೆಗೂ ₹ 3,300 ಬೆಲೆ ನೀಡುವಂತೆ ಒತ್ತಾಯಿಸಿ ಈ ಧರಣಿ ಆರಂಭಿಸಲಾಗಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಶೇ 11.25ರಷ್ಟಿದೆ. ಅದೇ ಇಳುವರಿ ಆಧರಿಸಿ ₹3,300 ಬೆಲೆ ನಿಗದಿಪಡಿಸಲಾಗಿದೆ. ಆದರೆ, ಹಾವೇರಿಯಲ್ಲಿರುವ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿ ಮತ್ತು ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್‌ ಕಂಪನಿಯ ಮೂರು ಕಾರ್ಖಾನೆಗಳ ಇಳುವರಿ ಕಡಿಮೆಯಿದೆ. ಇದೇ ಕಾರಣ ಮುಂದಿಟ್ಟುಕೊಂಡು ಕಡಿಮೆ ಬೆಲೆ ನೀಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆಗೆ ಬೀಗ: ‘ಇಳುವರಿ ನಿರ್ಧಾರದಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ತೂಕದಲ್ಲಿ ಮೋಸವಾಗುತ್ತಿದೆ. ಈಗ ಬೆಲೆಯಲ್ಲೂ ಮೋಸವಾದರೆ, ರೈತರು ಸುಮ್ಮನಿರುವುದಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ ರೈತರಿಗೂ ₹ 3,300 ಕೊಡಿಸಬೇಕು. ₹ 3,200 ಕೊಟ್ಟರೂ ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಇದಕ್ಕಾಗಿ ಈಗ ಧರಣಿ ಮಾಡುತ್ತಿದ್ದೇವೆ. ಕೇಳಿದಷ್ಟು ಬೆಲೆ ನೀಡದಿದ್ದರೆ, ಮೂರು ಕಾರ್ಖಾನೆಗಳಿಗೆ ಬೀಗ ಹಾಕುತ್ತೇನೆ. ಕಬ್ಬು ಕಟಾವು ನಿಲ್ಲಿಸುತ್ತೇವೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಜಿಲ್ಲಾಧಿಕಾರಿ ಭೇಟಿ: ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಭೇಟಿ ನೀಡಿ, ರೈತರ ಜೊತೆ ಮಾತುಕತೆ ನಡೆಸಿದರು.

‘ನಿಮ್ಮ ಬೇಡಿಕೆಗಳು ಗಮನದಲ್ಲಿವೆ. ಅವುಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇನೆ. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ. ಈಗ ಧರಣಿ ಕೈಬಿಡಿ’ ಎಂದು ಜಿಲ್ಲಾಧಿಕಾರಿ ಕೋರಿದರು. ಅದಕ್ಕೆ ಒಪ್ಪದ ಪ್ರತಿಭಟನಕಾರರು, ಧರಣಿ ಮುಂದುವರಿಸಿದ್ದಾರೆ. ಸೋಮವಾರ ರಾತ್ರಿಯೂ ಧರಣಿ ಸ್ಥಳದಲ್ಲಿಯೇ ಮಲಗಿ ಆಕ್ರೋಶ ಹೊರಹಾಕಿದರು.

ಜಿಲ್ಲೆಯ ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ರಟ್ಟೀಹಳ್ಳಿ, ಹಾನಗಲ್, ಹಿರೇಕೆರೂರ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಕಬ್ಬು ಬೆಳೆಗಾರರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಸಿ.ಎಂ. ಸಚಿವರಿಂದ ದ್ರೋಹ’

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ದ್ರೋಹ ಮಾಡುತ್ತಿದ್ದಾರೆ’ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ದೂರಿದರು. ಧರಣಿ ಸ್ಥಳದಲ್ಲಿ ಮಾತನಾಡಿದ ಅವರು ‘ಬೆಳಗಾವಿ ಬಾಗಲಕೋಟೆಯಲ್ಲಿ ₹ 3300 ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳು ಶೇ 9.42 ಇಳುವರಿ ತೋರಿಸುತ್ತಿವೆ. ಹೀಗಾಗಿ ಕಡಿಮೆ ಬೆಲೆ ನೀಡುವುದಾಗಿ ಕಾರ್ಖಾನೆಗಳು ಹೇಳುತ್ತಿವೆ’ ಎಂದರು.

ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳು

* ಬೆಳಗಾವಿ ಬಾಗಲಕೋಟೆ ಜಿಲ್ಲೆಯಂತೆ ಹಾವೇರಿ ಜಿಲ್ಲೆಯ ಕಬ್ಬಿಗೂ ₹ 3300 ನೀಡಬೇಕು.

* ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರು ಭರಿಸಬೇಕು.

* ಸಕ್ಕರೆ ಇಳುವರಿ ಪರೀಕ್ಷೆಯಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಲು ಸರ್ಕಾರವೇ ಪರೀಕ್ಷೆ ಜವಾಬ್ದಾರಿ ವಹಿಸಿಕೊಳ್ಳಬೇಕು

* ಕಾರ್ಖಾನೆ ಆವರಣದಲ್ಲಿ ಸರ್ಕಾರದಿಂದಲೇ ಪ್ರತ್ಯೇಕ ತೂಕದ ಯಂತ್ರ ಅಳವಡಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.