
ಹಾವೇರಿ: ‘ಕಬ್ಬಿಗೆ ನಿಗದಿಪಡಿಸಿರುವ ಬೆಲೆಯನ್ನು ರೈತರಿಗೆ ಕೊಡಿಸುವುದು ರಾಜ್ಯ ಸರ್ಕಾರ ಕರ್ತವ್ಯ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಕಾರ್ಖಾನೆ ಮಾಲೀಕರು ಕೊಡಬೇಕು. ಆದೇಶ ಪಾಲನೆ ಆಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು’ ಎಂದರು.
‘ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಎಸ್‌ಎಪಿ ಕಾನೂನು ಮಾಡಿದ್ದೇವೆ. ಸಕ್ಕರೆ ಮತ್ತು ಇತರೆ ಉತ್ಪಾದನೆ ಖರ್ಚುಗಳು ಎಷ್ಟು ? ಲಾಭದಲ್ಲಿ ರೈತನಿಗೆ ಎಷ್ಟು ? ಕಾರ್ಖಾನೆಗೆ ಎಷ್ಟು ? ಎನ್ನುವುದು ಕಾನೂನಿನಲ್ಲಿದೆ. ಆದರೆ, ಮುಖ್ಯಮಂತ್ರಿ ಕಾನೂನು ನೋಡುತ್ತಿಲ್ಲ’ ಎಂದು ಆರೋಪಿಸಿದರು.
ಭ್ರಷ್ಟಾಚಾರದ ಪರಿಣಾಮ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸರ್ಕಾರ ಯಾವ ರೀತಿ ಇದೆಯೋ, ಜೈಲಿನ ಒಳಗಡೆ ಸಹ ಅದೇ ರೀತಿ ಇರುತ್ತದೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಪ್ರಕರಣ ಹಿಂಪಡೆದಿದ್ದಾರೆ. ಈ ಸರ್ಕಾರ ಏನ್ ಸಂದೇಶ ಕಳಿಸುತ್ತಿದೆ. ಜೈಲಿನಿಂದ ಹಿಡಿದು ವಿಧಾನಸೌಧದದ 3ನೇ ಮಹಡಿವರೆಗೂ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.