ADVERTISEMENT

ರಾಣೆಬೆನ್ನೂರು: ಬರಿದಾದ ತುಂಗಭದ್ರಾ ನದಿ ಒಡಲು

ರಾಣೆಬೆನ್ನೂರು ನಗರಕ್ಕೆ 24x7 ನೀರು ಪೂರೈಕೆ ಸ್ಥಗಿತ: ಕೊಳವೆಬಾವಿಯ ನೀರೇ ಗತಿ

Sarikashree KC
Published 28 ಮಾರ್ಚ್ 2024, 6:01 IST
Last Updated 28 ಮಾರ್ಚ್ 2024, 6:01 IST
ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣ ಬಳಿ ತುಂಗಭದ್ರಾ ನದಿ ಬರಿದಾಗಿರುವುದು
ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣ ಬಳಿ ತುಂಗಭದ್ರಾ ನದಿ ಬರಿದಾಗಿರುವುದು   

ರಾಣೆಬೆನ್ನೂರು: ಜಿಲ್ಲೆಯ ಜೀವನದಿ ಎನಿಸಿದ ತುಂಗಭದ್ರಾ ನದಿಯ ಒಡಲು ಸಂಪೂರ್ಣ ಬರಿದಾಗಿದೆ. ಈ ನದಿಯ ನೀರನ್ನೇ ಅವಲಂಬಿಸಿದ್ದ 24x7 ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡು ರಾಣೆಬೆನ್ನೂರು ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. 

ತಾಲ್ಲೂಕಿನ ಮುದೇನೂರು ಬಳಿ ತುಂಗಭದ್ರಾ ನದಿಯಿಂದ ಜಾಕ್‌ವೆಲ್‌ ಮೂಲಕ ನೀರು ತಂದು, ಸಿದ್ಧೇಶ್ವರ ನಗರದಲ್ಲಿ ಶುದ್ಧೀಕರಿಸಿ ನಗರಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಯಿಂದ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ತುಂಗಭದ್ರಾ ನದಿ ನೀರು ಸಂಪೂರ್ಣ ಬರಿದಾಗಿದ್ದರಿಂದ 35 ವಾರ್ಡ್‌ಗಳಿಗೆ ಕೊಳವೆಬಾವಿಯ ನೀರೇ ಗತಿಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 108 ಗ್ರಾಮಗಳಿದ್ದು, ಅದರಲ್ಲಿ 80 ಗ್ರಾಮಗಳಿಗೆ ಕುದರಿಹಾಳ, ಕರ್ಲಗೇರಿ ಮತ್ತು ಬೈರನಪಾದ ಈ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಎಲ್ಲಾ ಮನೆಗಳಿಗೂ ಮನೆ– ಮನೆಗೆ ಗಂಗೆ, ಜಲಜೀವನ ಯೋಜನೆಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ನದಿಯಲ್ಲಿ ನೀರು ಇಲ್ಲದ ಕಾರಣ ಎಲ್ಲ ಕಡೆ ಬೋರ್‌ವೆಲ್‌ನಿಂದ ನೀರು ಪೂರೈಕೆ ಮಾಡಿ, ಜನರ ಬಾಯಾರಿಕೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ.

ADVERTISEMENT

ನೀರಿಗೆ ಪರದಾಟ:

ಅಡವಿ ಆಂಜನೇಯ ಬಡಾವಣೆಯಲ್ಲಿ 1500ಕ್ಕೂ ಹೆಚ್ಚು ಬಡವರು, ಗುಡಿಸಲು ವಾಸಿಗಳು, ಬಗರಿಕಾರರು, ವೇಷಗಾರರು ವಾಸವಾಗಿದ್ದಾರೆ. ಇವರೆಲ್ಲರೂ ಈಗ ನೀರಿಗಾಗಿ ಪರದಾಡುವಂತಾಗಿದೆ. ಆಂಜನೇಯ ದೇವಸ್ಥಾನದ ಬೋರ್‌ವೆಲ್‌ ಅಥವಾ ಸುತ್ತಮುತ್ತಲಿನ ತೋಟದಿಂದ ನೀರು ತರುವ ಪರಿಸ್ಥಿತಿ ಒದಗಿದೆ. ದೊಡ್ಡ ಕರೆಯಲ್ಲಿ ನೀರು ಬರಿದಾಗಿದ್ದರಿಂದ ಬೋರ್‌ವೆಲ್‌ಗಳು ಕೂಡ ನೀರು ಕಡಿಮೆಯಾಗಿವೆ ಎನ್ನುತ್ತಾರೆ ಸಿದ್ದಣ್ಣ ಹಾದಿಮನಿ.

ತಾಲ್ಲೂಕಿನ ಮೇಡ್ಲೇರಿ, ಚಳಗೇರಿ, ಗಂಗಾಪುರ, ಕುದರಿಹಾಳ, ಕರೂರ, ಸುಣಕಲ್ಲಬಿದರಿ, ಬೆನಕನಕೊಂಡ ಕೆರೆ ಮತ್ತು ಅಸುಂಡಿ ದೊಡ್ಡ ಕೆರೆ ಮತ್ತು ಗುಡಗೂರ ಕೆರೆಯಲ್ಲಿ ನೀರು ತೀವ್ರ ಕಡಿಮೆಯಾಗಿ ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಕುಸಿದಿವೆ. ಈ ಬಾರಿ ಮುಂಗಾರು ಹಂಗಾಮಿನಿಂದ ಇಲ್ಲಿಯವರೆಗೂ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಹೆಚ್ಚಾಗಿದೆ.

10 ಕೊಳವೆಬಾವಿ ಬಂದ್‌:

ತಾಲ್ಲೂಕಿನ ಬ್ಯಾಡಗಿ ಮತ ಕ್ಷೇತ್ರದ ವ್ಯಾಪ್ತಿಯ 26 ಹಳ್ಳಿಗಳಲ್ಲಿ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಡಿಸೆಂಬರ್‌ ತಿಂಗಳಿಂದಲೇ ಸಮಸ್ಯೆ ಎದುರಾಗಿದೆ. ಈ ಗ್ರಾಮವು 5000 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ನದಿ ನೀರಿನ ಯೋಜನೆಗಳು ಯಾವುದೂ ಇಲ್ಲ. ಒಟ್ಟು 12 ಬೋರ್‌ವೆಲ್‌ಗಳಲ್ಲಿ 10 ಬೋರ್‌ವೆಲ್‌ಗಳಲ್ಲಿ ನೀರು ನಿಂತು ಹೋಗಿದೆ. ಸದ್ಯ 2 ಕೊಳವೆಬಾವಿಗಳಲ್ಲಿ ಮಾತ್ರ ನೀರು ಬರುತ್ತಿದೆ.

ರಾಣೆಬೆನ್ನೂರಿನ ಗುರುಕೊಟ್ಟೂರೇಶ್ವರ ನಗರದ ದೊಡ್ಡ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು
ತಾಲ್ಲೂಕಿನಲ್ಲಿ 80 ಗ್ರಾಮಗಳಿಗೆ ಬಹುಗ್ರಾಮ ನೀರಿನ ಯೋಜನೆಯಿಂದ ನೀರು ಪೂರೈಸಲಾಗುತ್ತಿದೆ. ಟಾಸ್ಕ್‌ ಪೋರ್ಸ್‌ ಸಮಿತಿಯಿಂದ ಪರವಾನಗಿ ಪಡೆದು ಹೊಸ ಬೋರ್‌ವೆಲ್‌ ಕೊರೆಸಲಾಗಿದೆ
– ರಾಮಕೃಷ್ಣ ಸಹಾಯಕ ಎಂಜಿನಿಯರ್‌ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ತುಂಗಭದ್ರಾ ನದಿ ಬರಿದಾಗಿದ್ದರಿಂದ ರಾಣೆಬೆನ್ನೂರಿನ 24x7 ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿದೆ. ನಗರದ 35 ವಾರ್ಡ್‌ಗಳಿಗೂ ಬೋರ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿದೆ
- ಎನ್‌.ಕೆ. ಕುಮ್ಮಣ್ಣನವರ. ಪೌರಾಯುಕ್ತ ರಾಣೆಬೆನ್ನೂರು
ನಾವು ಕೃಷಿ ಚಟುವಟಿಗಳಿಗೆ ನೀರು ಕೇಳುತ್ತಿಲ್ಲ. ಕುಡಿಯಲು ನೀರು ಕೇಳುತ್ತಿದ್ದೇವೆ. ತಕ್ಷಣವೇ ಭದ್ರಾ ಅಣೆಕಟ್ಟಿನಿಂದ ತುಂಗಭದ್ರಾ ನದಿಗೆ 2 ಟಿಂಎಂಸಿ ನೀರು ಹರಿಸಿ ಜನರ ಬಾಯಾರಿಕೆ ನೀಗಿಸಬೇಕು
– ಈರಣ್ಣ ಹಲಗೇರಿ ಮಾಕನೂರು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪಾಳುಬಿದ್ದ ಶುದ್ಧ ನೀರಿನ ಘಟಕ
ಗಂಗಾಜಲ ತಾಂಡಾ ಗೋವಿಂದ ಬಡಾವಣೆ ಮತ್ತು ಬಸಲೀಕಟ್ಟಿ ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳು ಬಿದ್ದು ಎಷ್ಟೇ ವರ್ಷಗಳು ಗತಿಸಿವೆ. ಸದ್ಯ ಜಲಜೀವನ ಯೋಜನೆ ಮತ್ತು ಬೋರ್‌ವೆಲ್‌ ನೀರು ಪೂರೈಕೆಯಾಗುತ್ತಿದೆ. ಶುದ್ದ ಕುಡಿಯುವ ನೀರಿಗೆ ರಾಣೆಬೆನ್ನೂರು ಪಟ್ಟಣಕ್ಕೆ ಬಂದು ಬೈಕ್‌ಗಳನ್ನು ಕೊಡಪಾನ ತುಂಬಿಕೊಂಡು ಹೋಗುತ್ತಿರುವ ದೃಶ್ಯ ದಿನಾಲು ಕಂಡು ಬರುತ್ತಿದೆ ಎನ್ನುತ್ತಾರೆ ಗಂಗಾಜಲ ತಾಂಡಾದ ನಿವಾಸಿ ರಮೇಶ ಡಿ.ಎಲ್‌ ನಾಯಕ.  
ಬರಿದಾದ ದೊಡ್ಡಕೆರೆ
‘ಇಲ್ಲಿನ ಕೊಟ್ಟೂರೇಶ್ವರ ನಗರದ ದೊಡ್ಡ ಕೆರೆಯು 266 ಎಕರೆ ವಿಸ್ತೀರ್ಣ ಹೊಂದಿದ್ದು 150 ವರ್ಷ ಇತಿಹಾಸ ಹೊಂದಿದೆ. ಈ ಕೆರೆಗೆ ನಗರಸಭೆಯಿಂದ ತಾಲ್ಲೂಕಿನ ಕುದರಿಹಾಳ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತಿತ್ತು. ದೊಡ್ಡಕೆರೆಯನ್ನು ಅಭಿವೃದ್ಧಿ ಮಾಡಿ ದೋಣಿ ವಿಹಾರ ಮಾಡುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೀರು ತುಂಬಿಸುವುದು ಬಂದ್‌ ಆಗಿದೆ. ಇದರಿಂದ ಈ ಭಾಗದ ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ’ ಎನ್ನುತ್ತಾರೆ ಪಂಚಯ್ಯ ಮುದಗಲ್ಲಮಠ ಹಾಗೂ ಪ್ರಕಾಶ ಬಣಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.