ADVERTISEMENT

ಹಾವೇರಿ ಮಹಿಳೆ ಹೊಟ್ಟೆಯಿಂದ 8.5 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 10:01 IST
Last Updated 3 ನವೆಂಬರ್ 2022, 10:01 IST
ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ  ಉದರ ಬೇನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ 8.5 ಕೆ.ಜಿ ತೂಕದ ದುರ್ಮಾಂಸ ಗಡ್ಡೆಯನ್ನು ವೈದ್ಯಾಧಿಕಾರಿ ಶಂಕರಗೌಡ ಹಿರೇಗೌಡ್ರ,  ಡಾ.ವೀರೇಶ ಮಠಪತಿ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದರು
ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ  ಉದರ ಬೇನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ 8.5 ಕೆ.ಜಿ ತೂಕದ ದುರ್ಮಾಂಸ ಗಡ್ಡೆಯನ್ನು ವೈದ್ಯಾಧಿಕಾರಿ ಶಂಕರಗೌಡ ಹಿರೇಗೌಡ್ರ,  ಡಾ.ವೀರೇಶ ಮಠಪತಿ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದರು   

ಸವಣೂರು: ಉದರ ಬೇನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿನ ಸುಮಾರು 8.5 ಕೆ.ಜಿ ತೂಕದ ದುರ್ಮಾಂಸ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಎಸ್.ವೈ.ಹಿರೇಗೌಡ್ರ ನೇತೃತ್ವದ ತಂಡ ಹೊರತೆಗೆದಿದೆ.

ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ 52 ವರ್ಷದ ಮಹಿಳೆ, ಕಳೆದ ಹಲವು ವರ್ಷಗಳಿಂದ ಉದರ ಬೇನೆಯಿಂದ ಬಳಲುತ್ತಿದ್ದರು. ಬೇನೆ ಉಲ್ಬಣಗೊಳ್ಳುತ್ತಿದ್ದಂತೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಬೃಹದಾಕಾರದ ಮಾಂಸದ ಗಡ್ಡೆ ಇರುವುದು ತಿಳಿದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅವರನ್ನು ಕಳುಹಿಸಿಕೊಡಲಾಗಿತ್ತು.

ಆತಂಕಗೊಂಡ ಮಹಿಳೆ ಮತ್ತು ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಗೆ ತೆರಳದೆ ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷೆ ಕೈಗೊಂಡ ವೈದ್ಯಾಧಿಕಾರಿ ಡಾ. ಎಸ್.ವೈ.ಹಿರೇಗೌಡ್ರ ಹಾಗೂ ವೈದ್ಯ ಡಾ.ವೀರೇಶ ಮಠಪತಿ ಶುಶ್ರೂಷಕಿಯರಾದ ವೀಣಾ ಇನಾಮತಿ ಹಾಗೂ ನಸೀಮಾ ಮಕಾಂದರ ಶಸ್ತ್ರ ಚಿಕಿತ್ಸೆ ಮಾಡಿ, ಗಡ್ಡೆ ಹೊರತೆಗಿಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಸರ್ಕಾರಿ ಆಸ್ಪತ್ರೆಗಳೆಂದರೆ ಸಾರ್ವಜನಿಕರಲ್ಲಿ ಕೀಳರಿಮೆ ಇತ್ತು. ಅದನ್ನು ತಪ್ಪಿಸುವ ಸಲುವಾಗಿ ಸ್ಥಳೀಯ ಶಾಸಕ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ನುರಿತ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿಯನ್ನು ಸಮರ್ಪಕವಾಗಿ ನಿಯೋಜನೆ ಮಾಡಿ, ವೈದ್ಯಕೀಯ ಸೌಲಭ್ಯ ಹೆಚ್ಚಿಸಿರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಲು ಸಹಕಾರಿಯಾಗಿದೆ. ಸವಣೂರ-ಶಿಗ್ಗಾವಿ ಸೇರಿದಂತೆ ಹಾನಗಲ್, ಕುಂದಗೋಳ, ಲಕ್ಷ್ಮೇಶ್ವರ, ಹಾವೇರಿ, ಶಿರಹಟ್ಟಿ ಸೇರಿದಂತೆ ವಿವಿಧ ಭಾಗಗಳಿಂದ ರೋಗಿಗಳು ಬಂದು ಈಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ವೈ.ಹಿರೇಗೌಡ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.