ADVERTISEMENT

ವೈಫಲ್ಯ ಮುಚ್ಚಲು, ಸೇನೆಯ ಹೆಸರು ದುರ್ಬಳಕೆ: ನಿವೃತ್ತ ಲೆ.ಜನರಲ್ ರಮೇಶ ಹಲಗಲಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 15:10 IST
Last Updated 3 ಏಪ್ರಿಲ್ 2019, 15:10 IST
ಲಿಫ್ಟಿನೆಂಟ್ ಜನರಲ್ ರಮೇಶ ಹಲಗಲಿ
ಲಿಫ್ಟಿನೆಂಟ್ ಜನರಲ್ ರಮೇಶ ಹಲಗಲಿ   

ಹಾವೇರಿ:ಇಂಟೆಲಿಜೆನ್ಸ್ (ಗುಪ್ತಚರ) ಮಾಹಿತಿ ಇದ್ದರೂ ಪುಲ್ವಾಮಾ ದಾಳಿ ತಡೆಯಲು ಪ್ರಧಾನಿ ನರೇಂದ್ರ ಮೋದಿ ಏಕೆ ಕ್ರಮ ಕೈಗೊಂಡಿಲ್ಲ? ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಪ್ರಶ್ನಿಸಿದರು.

ಮೋದಿಯವರಿಗೆ ಚುನಾವಣೆ ಗೆಲ್ಲಬೇಕು ಎಂಬ ಉದ್ದೇಶ ಇದ್ದಿರಬೇಕು. ಹೀಗಾಗಿ, 48 ಸೈನಿಕರು ಬಲಿಯಾದರೂ, ಅವರು ಅಂದು ಉತ್ತರ ಪ್ರದೇಶದಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು ಎಂದು ಇಲ್ಲಿ ಬುಧವಾರ ನಡೆದ ಮೈತ್ರಿ ಅಭ್ಯರ್ಥಿಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪುಲ್ವಾಮಾ ವೈಫಲ್ಯದ ಬಗ್ಗೆ ಈ ತನಕ ಯಾವುದೇ ಪರಿಶೀನೆ ನಡೆಸಿಲ್ಲ. ಆದರೆ, ತುರ್ತಾಗಿ ‘ಸರ್ಜಿಕಲ್ ಸ್ಟೈಕ್’ ಮಾಡಿಸಿದರು. ಅದೂ ಕ್ರಮಬದ್ಧವಾಗಿ ನಡೆದಿಲ್ಲ. ಇಂದಿಗೂ ವಾಯುಸೇನೆಯವರು ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಬಿಜೆಪಿ ಅಧ್ಯಕ್ಷ ಅಮಿತ್ ಶಾ 400 ಮಂದಿ ಸತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.

ADVERTISEMENT

ಮೋದಿ ಸೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ನಾವು ಭಾರತದ ಸೇನೆಯವರು. ರಫೇಲ್ ಹಗರಣ ಹೊರಗೆ ಬಂದರೆ ಎಲ್ಲವೂ ಗೊತ್ತಾಗುತ್ತದೆ ಎಂದರು.

ದೇಶದ ನಿರುದ್ಯೋಗ, ಬಡತನ, ರೈತರು– ಮಹಿಳೆಯರ ಸಂಕಷ್ಟ, ಅಭಿವೃದ್ಧಿ ಹಿನ್ನಡೆಯನ್ನು ಮುಚ್ಚಿ ಹಾಕಲು ಪ್ರಧಾನಿ ನರೇಂದ್ರ ಮೋದಿ ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ ಎಂದು ದೂರಿದ ಅವರು, ನಾನು 41 ವರ್ಷ ಸೇನೆಯಲ್ಲಿದ್ದು, 3 ಯುದ್ಧಗಳಲ್ಲಿ ಪಾಲ್ಗೊಂಡಿದ್ದೇನೆ ಎಂದರು.

ಚುನಾವಣೆ ಸಲುವಾಗಿ ಮೋದಿ ರಾಷ್ಟ್ರೀಯ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಧಾನಿ ₹25 ಲಕ್ಷದ ಕೋಟು ಹಾಕಬಹುದು. ಆದರೆ, ಸೇನೆಯ ಸಮವಸ್ತ್ರ ಧರಿಸಬಾರದು. ಈ ಬಗ್ಗೆ ಮೂರು ಸೇನೆಯ (ಭೂ, ವಾಯು, ಜಲ) ದಂಡನಾಯಕರು ಮಹಾದಂಡ ನಾಯಕರಿಗೆ (ರಾಷ್ಟ್ರಪತಿ) ಪತ್ರ ಬರೆದಿದ್ದಾರೆ. ಸಮವಸ್ತ್ರವು ಸೈನಿಕರ ಗೌರವದ ಪ್ರತೀಕ. ಅದರ ಬಗ್ಗೆ ಯಾರೂ ಅಗೌರವ ತೋರಿಸಬಾರದು ಎಂದರು.

ದೇಶದ ಭದ್ರತೆಯನ್ನು ಮೋದಿ ಕ್ಷೀಣಗೊಳಿಸಿದ್ದಾರೆ. ಈ ಹಿಂದೆ 1947, 1962, 1968 ಹಾಗೂ 1971ರ ಯುದ್ಧದಲ್ಲಿ ಭಾರತ ಗೆದ್ದಿದೆ. ನಾನೇ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇನೆ. ಆದರೆ, ನನ್ನ ಅಥವಾ ಕಾಂಗ್ರೆಸ್‌ನ ಹೆಸರು ಎಲ್ಲಿಯೂ ಬರಲಿಲ್ಲ. ನೇರವಾಗಿ ರಾಷ್ಟ್ರಪತಿ ಕರೆದು ನಮ್ಮನ್ನು ಸನ್ಮಾನಿಸಿದರು. ಯಾವುದೇ ರಾಜಕಾರಣಿಗಳು ಪ್ರಚಾರ ಪಡೆದುಕೊಂಡಿರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.